ನವದೆಹಲಿ:ಬಿಜೆಪಿ ಆಡಳಿತರೂಢ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿರುವುದನ್ನು ವಿರೋಧಿಸಿ ಆರ್‌ಎಸ್‌ಎಸ್ ಸಂಯೋಜಿತ ಭಾರತೀಯ ಮಜ್ದೂರ್ ಸಂಘಟನೆಯು (ಬಿಎಂಎಸ್) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಕೊರೊನಾ ವೈರಸ್ ಪ್ರಚೋದಿತ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರ ಸಮಸ್ಯೆಗಳು ಉಲ್ಬಣಗೊಂಡಿವೆ. ಬಹುತೇಕ ರಾಜ್ಯಗಳು ಕಾರ್ಮಿಕ ಕಾನೂನುಗಳ ಸಂಪೂರ್ಣ ಉಲ್ಲಂಘನೆ ಮಾಡಿವೆ ಎಂದು ಬಿಎಂಎಸ್ ಆರೋಪಿಸಿದೆ.
ರಾಜಸ್ಥಾನ, ಒಡಿಶಾ, ಗೋವಾ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳು ಕೆಲಸದ ಸಮಯವನ್ನು ಹೆಚ್ಚಿಸುವುದರ ವಿರುದ್ಧವೂ ಪ್ರತಿಭಟಿಸುವುದಾಗಿ ಬಿಎಂಎಸ್ ತಿಳಿಸಿದೆ. ಪಂಜಾಬ್ ಮತ್ತು ಅಸ್ಸೋಂ ಸಹ ಕೆಲಸದ ಮಿತಿಯನ್ನು ದಿನದಲ್ಲಿ 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಿವೆ. ಇದು ವಾರದಲ್ಲಿ 72 ಗಂಟೆಯಾಗಲಿದೆ.
ಕೆಲಸದ ಸಮಯವನ್ನು 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಈ ಪ್ರವೃತ್ತಿಯನ್ನು ಅನುಸರಿಸಲು ಇನ್ನೂ ಅನೇಕ ರಾಜ್ಯಗಳು ಸಿದ್ಧವಾಗಿವೆ ಎಂಬುದು ತಿಳಿದುಬಂದಿದೆ. ಇದು ಇತಿಹಾಸದಲ್ಲಿ ಇಂತಹ ನಿರ್ಧಾಗಳು ಕೇಳಿಬಂದಿಲ್ಲ. ಪ್ರಜಾಪ್ರಭುತ್ವ ವಿರೋಧಿ ದೇಶಗಳಲ್ಲಿಯೂ ಇದು ಅಪರೂಪ ಎಂದು ಬಿಎಂಎಸ್ ಮುಖ್ಯಸ್ಥ ವರ್ಜೇಶ್ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 20ರಂದು ಒಕ್ಕೂಟವು ರಾಷ್ಟ್ರವ್ಯಾಪಿ ಪ್ರತಿಭಟನಾ ನಡೆಸಲಿದೆ. ಮೇ 13ರಂದು ನಡೆದ ಬಿಎಂಎಸ್ ರಾಷ್ಟ್ರೀಯ ಪದಾಧಿಕಾರಿಗಳ ವೆಬ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರ ಪ್ರದೇಶದ ಕಾರ್ಮಿಕ ಇಲಾಖೆಯು ಕಾರ್ಮಿಕರ ಕಾನೂನುಗಳನ್ನು ಮೂರು ವರ್ಷ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದನ್ನು ಒಕ್ಕೂಟ ಬಲವಾಗಿ ಖಂಡಿಸಿದೆ.