ನವದೆಹಲಿ :ಆಗಸ್ಟ್ ಮಾಸಿಕದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 86,449 ಕೋಟಿ ರೂಪಾಯಿನಷ್ಟಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.
ಜುಲೈನಲ್ಲಿ 87,422 ಕೋಟಿ ರೂ. ಜಿಎಸ್‌ಟಿ ಸಂಗ್ರಹ ಆಗಿದ್ದಕ್ಕಿಂತ ಈ ಸಂಖ್ಯೆ ಕಡಿಮೆ ಆಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ₹98,202 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಜಮಾವಣೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಆಗಸ್ಟ್‌ನಲ್ಲಿ ಸಂಗ್ರಹವಾದ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ₹ 15,906 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹ 21,064 ಕೋಟಿ, ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ₹ 42, 264 ಕೋಟಿ ಮತ್ತು ಸೆಸ್ ಮೊತ್ತ ₹ 7,215 ಕೋಟಿಯಷ್ಟಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆಯೂ ಜಿಎಸ್‌ಟಿಯ ಕಡಿಮೆ ಆದಾಯವು ಸರ್ಕಾರಕ್ಕೆ ವಿವಾದದ ನಡುವೆ ಮತ್ತೊಂದು ಗಾಯವಾದಂತಿದೆ. ಜೂನ್‌ನಲ್ಲಿ ಜಿಎಸ್‌ಟಿ ಸಂಗ್ರಹವು 90,000 ಕೋಟಿ ರೂ. ಗಡಿ ದಾಟಿ, ಅದು ಸ್ವಲ್ಪಮಟ್ಟಿಗೆ ಏರಿಕೆ ಆಗಿತ್ತು. ಆದರೆ, ಅಂದಿನಿಂದ ಎರಡು ತಿಂಗಳವರೆಗೆ ಕುಸಿತ ಕಾಣುತ್ತಿದೆ.
ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕೆ ಹೋಲಿಸಿದರೆ ಶೇ.88ರಷ್ಟು ಸಂಗ್ರಹವಾಗಿದೆ. ಸರಕುಗಳ ಆಮದಿನಿಂದ ಬರುವ ಆದಾಯವು ಶೇ.77ರಷ್ಟು ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಶೇ.92ರಷ್ಟಿತ್ತು. ₹5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ತೆರಿಗೆದಾರರು ಸೆಪ್ಟೆಂಬರ್‌ವರೆಗೆ ರಿಟರ್ನ್ಸ್ ಸಲ್ಲಿಸುವಲ್ಲಿ ವಿನಾಯಿತಿ ಪಡೆಯುತ್ತಿದ್ದಾರೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ತೆರಿಗೆ ಸಂಗ್ರಹದಲ್ಲಿ ಹಿನ್ನಡೆ ಕಂಡು ಬಂದಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಜಮಾವಣೆಯಲ್ಲಿ ಶೇ.11ರಷ್ಟು ಕ್ಷೀಣಿಸಿದೆ. 2019ರ ಆಗಸ್ಟ್‌ನಲ್ಲಿ 6,201 ಕೋಟಿ ರೂ. ಸಂಗ್ರಹ ಆಗಿದ್ದರೆ, ಈ ವರ್ಷ ಅದು 5,502 ಕೋಟಿ ರೂ.ಗೆ ತಲುಪಿದೆ.