ನವದೆಹಲಿ :ಆರ್ಥಿಕತೆ ಮತ್ತು ವಿತ್ತೀಯ ಸಂಬಂಧಿತ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಕೋವಿಡ್-19 ಅವಧಿಯಲ್ಲಿ ಪ್ರಾರಂಭಿಸಲಾದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ವರದಿ ಕಾರ್ಡ್ ಬಿಡುಗಡೆ ಮಾಡಿದೆ.
ಎಸ್‌ಎಂಇಗಳಿಗೆ ಸರ್ಕಾರದ ಮಧ್ಯಸ್ಥಿಕೆ ಒದಗಿಸಲಾಗಿದೆ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಬ್ಯಾಂಕ್ ಸಾಲ ನಿರ್ಬಂಧಗಳ ಏರಿಕೆ ಕಡಿಮೆಯಾಗಿದೆ ಎಂಬುದು ತಿಳಿದು ಬರುತ್ತದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಖಾತರಿಯ ಬೆಂಬಲದ ಜೊತೆಗೆ ಇಸಿಎಲ್‌ಜಿಎಸ್ ಅಡಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಜೂನ್ 20ರ ವೇಳೆಗೆ 79,000 ಕೋಟಿ ರೂ. ಸಾಲ ಮಂಜೂರು ಮಾಡಿವೆ. ಇದರಲ್ಲಿ 35,000 ಕೋಟಿ ರೂ.ಗೂ ಅಧಿಕ ಹಣ ವಿತರಿಸಲಾಗಿದೆ ಎಂದಿದೆ.
ಎಸ್‌ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಿಎನ್‌ಬಿ ಮತ್ತು ಕೆನರಾ ಬ್ಯಾಂಕ್ ಈ ಯೋಜನೆಯಡಿ ಹೆಚ್ಚಿನ ಸಾಲ ನೀಡಿವೆ. ಲಾಕ್‌ಡೌನ್ ನಂತರದ ವ್ಯವಹಾರಗಳನ್ನು ಪುನರಾರಂಭಿಸಲು 19 ಲಕ್ಷ ಎಂಎಸ್‌ಎಂಇಗಳು ಮತ್ತು ಇತರರಿಗೆ ಸಾಲದ ನೆರವು ನೀಡಲಾಗಿದೆ.
'ಆತ್ಮನಿರ್ಭರ ಭಾರತ' ಪ್ಯಾಕೇಜ್ನ ಭಾಗವಾಗಿ ಎಂಎಸ್‌ಎಂಇ ಮತ್ತು ಸಣ್ಣ ಉದ್ಯಮಗಳಿಗೆ 3 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಬಿಡುಗಡೆ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಈಗಿರುವ ಸಾಲದಲ್ಲಿ ಶೇ.20ರಷ್ಟು ಹೆಚ್ಚುವರಿ ಸಾಲ ಸ್ವೀಕರಿಸಲು ಅರ್ಹರಾಗಿದ್ದರು.