ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಅನ್ವಯ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರವು ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 1.65 ಲಕ್ಷ ಕೋಟಿ ರೂ. ಪಾವತಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸೋಮವಾರ ಬಿಡುಗಡೆಯಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕೇಂದ್ರವು 2020ರ ಮಾರ್ಚ್ನಲ್ಲಿ 13,806 ಕೋಟಿ ರೂ. ಜಿಎಸ್‌ಟಿ ಪರಿಹಾರ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದೆ.
2019-29ರ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರ 19,233 ಕೋಟಿ ರೂ. ನಂತರದ ಸ್ಥಾನದಲ್ಲಿ ಕರ್ನಾಟಕ 18,628 ಕೋಟಿ ರೂ. ಮತ್ತು ಗುಜರಾತ್ 14,801 ಕೋಟಿ ರೂ. ಪಡೆದುಕೊಂಡಿವೆ.
ತಮಿಳುನಾಡು ಮತ್ತು ಪಂಜಾಬ್ ಕಳೆದ ವರ್ಷ ಜಿಎಸ್‌ಟಿ ಪರಿಹಾರದಲ್ಲಿ 12,000 ಕೋಟಿ ರೂ. ಸ್ವೀಕರಿಸಿದ್ದು, ಈ ವರ್ಷ ಕ್ರಮವಾಗಿ 12,305 ಕೋಟಿ ಮತ್ತು 12,187 ಕೋಟಿ ರೂ.ಪಡೆದಿವೆ. ಈ ಅಗ್ರ ಐದು ರಾಜ್ಯಗಳ ನಂತರ ಉತ್ತರ ಪ್ರದೇಶ 9,123 ಕೋಟಿ ರೂ., ದೆಹಲಿ 8,424 ಕೋಟಿ ರೂ., ಕೇರಳ 8,111 ಕೋಟಿ ರೂ., ರಾಜಸ್ಥಾನ 6,710 ಕೋಟಿ ರೂ. ಮತ್ತು ಹರಿಯಾಣ 6,617 ಕೋಟಿ ರೂ. ಸ್ವೀಕರಿಸಿವೆ.
2017ರ ಜಿಎಸ್‌ಟಿ ಪರಿಹಾರ ಕಾಯ್ದೆಯಡಿ, ರಾಜ್ಯಗಳು ತಮ್ಮ ಆದಾಯ ಸಂಗ್ರಹಣೆಯ ನಷ್ಟ ಸರಿದೂಗಿಸಲು ಐದು ವರ್ಷಗಳವರೆಗೆ ನಷ್ಟ ಪರಿಹಾರ ಒದಗಿಸಲಿದೆ. 2015-16ನೇ ಸಾಲಿನ ಮೂಲ ವರ್ಷದಲ್ಲಿ ಯೋಜಿತ ವರ್ಷದಿಂದ ವರ್ಷಕ್ಕೆ ಶೇ 14ರಷ್ಟು ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡು ಪರಿಹಾರದ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ.
2017-18ನೇ ಸಾಲಿನಲ್ಲಿ ಕೇಂದ್ರವು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಾಕಿಯಾಗಿ 62,956 ಕೋಟಿ ರೂ. ಪಾವತಿಸಿದೆ. 2018-19ರಲ್ಲಿ 95,081 ಕೋಟಿ ರೂ.ಗೆ ಏರಿದ್ದು, ಬೆಳವಣಿಗೆಯು ಶೇ. 51ಕ್ಕಿಂತ ಹೆಚ್ಚಾಗಿದೆ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಪಾವತಿ ಕಳೆದ ಹಣಕಾಸು ವರ್ಷದಲ್ಲಿ ಮತ್ತಷ್ಟು ಏರಿಕೆ ದಾಖಲಿಸಿದ್ದು, ಇದು 70,000 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಶೇ 73ರಷ್ಟು ಏರಿಕೆಯಾಗಿದೆ.
ನಿಧಾನಗತಿಯ ಆರ್ಥಿಕತೆ ಹಾಗೂ ಇತರೆ ಕಾರಣಗಳಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿ 2019-20ನೇ ಹಣಕಾಸು ವರ್ಷದಲ್ಲಿ ತೀವ್ರ ಆದಾಯದ ಕೊರತೆ ಎದುರಿಸುತ್ತಿವೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹಿಂದಿನ ಹಣಕಾಸು ವರ್ಷದ ಕೊನೆಯ ಎರಡು ತಿಂಗಳಲ್ಲಿ ಆದಾಯ ಸಂಗ್ರಹಣೆ ತೀವ್ರವಾಗಿ ಕುಸಿದಿದೆ. ಕೇಂದ್ರ ಸರ್ಕಾರದ ಜಿಎಸ್‌ಟಿ ಪರಿಹಾರ ಸೆಸ್ ಸಂಗ್ರಹವು 1,65,302 ಕೋಟಿ ರೂ. ಆಗಿದ್ದು, 69,858 ಕೋಟಿ ರೂ. ಕೊರತೆಯಾಗಿದೆ.
69,858 ಕೋಟಿ ರೂ. ಕೊರತೆಯನ್ನು ನೀಗಿಸಲು, ಕೇಂದ್ರವು 2017-18 ಮತ್ತು 2018-19ನೇ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಸೆಸ್ ಮೊತ್ತದ ಬಾಕಿ ಹಣ ಬಳಸಿಕೊಂಡಿತು. ಕಳೆದ ವಿತ್ತೀಯ ವರ್ಷದಲ್ಲಿ ಕೇಂದ್ರದ ಜಿಎಸ್‌ಟಿ ಸೆಸ್ ಸಂಗ್ರಹವನ್ನು ಕೇವಲ 95,444 ಕೋಟಿ ರೂ.ಗೆ ನಿಗದಿಪಡಿಸಲಾಗಿದ್ದು, ಇದು ಅಗತ್ಯ ಮೊತ್ತಕ್ಕಿಂತ ಸುಮಾರು 70,000 ಕೋಟಿ ರೂ.ಕಡಿಮೆಯಿದೆ.
2019-20ನೇ ಸಾಲಿನಲ್ಲಿ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕೀಂ 2019-20ನೇ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತ ಸ್ವೀಕರಿಸಲಿಲ್ಲ. ಇದರರ್ಥ ಈ ರಾಜ್ಯಗಳಲ್ಲಿ ತಮ್ಮದೇ ಆದ ಮೂಲಗಳಿಂದ ಆದಾಯದ ಬೆಳವಣಿಗೆ 2018-19ನೇ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇ 14ರಷ್ಟು ಅಥವಾ ಹೆಚ್ಚಿನದಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಆಂಧ್ರಪ್ರದೇಶ ಜಿಎಸ್‌ಟಿ ಪರಿಹಾರದಲ್ಲಿ 3,028 ಕೋಟಿ ರೂ., ಅಸ್ಸೋಂ 1,284 ಕೋಟಿ ರೂ., ಬಿಹಾರ 5,464 ಕೋಟಿ ರೂ. ಚತ್ತೀಸ್‌ಗಢ 4,521 ಕೋಟಿ ರೂ., ಗೋವಾ 1,093 ಕೋಟಿ ರೂ., ಹಿಮಾಚಲ ಪ್ರದೇಶ 2,477 ಕೋಟಿ ರೂ., ಜಮ್ಮು ಮತ್ತು ಕಾಶ್ಮೀರ 3,281 ಕೋಟಿ ರೂ. ಹಾಗೂ ಜಾರ್ಖಂಡ್ 2,219 ಕೋಟಿ ರೂ. ಪಡೆದಿದೆ.
ಮಧ್ಯಪ್ರದೇಶ- 6,538 ಕೋಟಿ ರೂ., ಮೇಘಾಲಯ- 157 ಕೋಟಿ ರೂ., ಒಡಿಶಾ - 5,122 ಕೋಟಿ ರೂ., ಪುದುಚೇರಿ-1,057 ಕೋಟಿ ರೂ., ತೆಲಂಗಾಣ- 3,054 ಕೋಟಿ ರೂ., ತ್ರಿಪುರ 293 ಕೋಟಿ ರೂ., ಉತ್ತರಾಖಂಡ 3,375 ರೂ. ಮತ್ತು ಪಶ್ಚಿಮ ಬಂಗಾಳ 6,200 ಕೋಟಿ ರೂ.ಯಷ್ಟು ಜಿಎಸ್‌ಟಿ ಪರಿಹಾರ ಸ್ವೀಕರಿಸಿವೆ.
-ಕೃಷ್ಣಾನಂದ ತ್ರಿಪಾಠಿ