ಲಂಡನ್ :ಮುಂದಿನ ಬುಧವಾರ ಸಂಸತ್ತಿನಲ್ಲಿ ತಮ್ಮ ಬಜೆಟ್ ಮಂಡಿಸಲಿರುವ ಬ್ರಿಟನ್ ಹಣಕಾಸು ಸಚಿವ ಚಾನ್ಸೆಲರ್ ರಿಷಿ ಸುನಕ್ ಅವರು ತಮ್ಮ ಆಯವ್ಯಯದಲ್ಲಿ ಹೊಸ ಮೂಲಸೌಕರ್ಯ ಬ್ಯಾಂಕ್ 22 ಬಿಲಿಯನ್ ಫಂಡ್ ಮೀಸಲಿಡುವ ನಿರೀಕ್ಷೆಯಿದೆ ಎಂದು ಯುಕೆ ಮಾಧ್ಯಮ ವರದಿ ಶನಿವಾರ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಆರ್ಥಿಕ ಕುಸಿತ ನಿಭಾಯಿಸುವ ಉದ್ದೇಶದಿಂದ ಕಳೆದ ವರ್ಷ ಫೆಬ್ರವರಿಯಲ್ಲಿ ಕ್ಯಾಬಿನೆಟ್ ಹುದ್ದೆಯ ಹಣಕಾಸು ಉಸ್ತುವಾರಿ ವಹಿಸಿಕೊಂಡಾಗಿನಿಂದ ಭಾರತೀಯ ಮೂಲದ ಹಣಕಾಸು ಸಚಿವ ಸುನಕ್, ಮಿನಿ ಬಜೆಟ್ ಸರಣಿ ಮಂಡಿಸಿದ್ದರು.
ನಿರೀಕ್ಷಿತ ಕೆಲ ದೊಡ್ಡ ಪ್ರಕಟಣೆಗಳ ಜತೆಗೆ ಸಾಲ ಗ್ಯಾರಂಟಿ ಯೋಜನೆ, ಸ್ಥಳೀಯ ಉದ್ಯಮಿಗಳ ಉತ್ತೇಜನ ಮತ್ತು ಉದ್ಯೋಗಾವಕಾಶ ಹೆಚ್ಚಿಸಲು ತರಬೇತಿ ನೀಡುವ ಯೋಜನೆಗೆ ಪ್ರಮುಖ ನಗದು ಉತ್ತೇಜನ ಸೇರಿವೆ.
ನ್ಯೂ ಯುಕೆ ಇನ್ಫ್ರಾಸ್ಟ್ರಕ್ಚರ್ ಬ್ಯಾಂಕ್‌ಗೆ ಆರಂಭಿಕ 12 ಬಿಲಿಯನ್ ಪೌಂಡ್ ಬಂಡವಾಳ ಮತ್ತು 10 ಬಿಲಿಯನ್ ಪೌಂಡ್ ಸರ್ಕಾರದ ಗ್ಯಾರಂಟಿ ನಿಗದಿಪಡಿಸುವ ಮೂಲಕ ಸರ್ಕಾರದ ಹಸಿರು ಆರ್ಥಿಕ ಯೋಜನೆಗಳಿಗೆ ಮತ್ತೊಂದು ಪ್ರಮುಖ ಪ್ರಕಟಣೆ ಹೊರ ಬರಲಿದೆ ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.