ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಆಯ್ಕೆಯಾದ ನಾಲ್ವರು ಶಾಸಕರ ಪೈಕಿ ಮೂವರು ಶಾಸಕರು ಕೋಟ್ಯಂತರ ರೂ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಇವರಲ್ಲಿ ಅರ್ಧದಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಆಫ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
ಎಡಿಆರ್ ಅನ್ವಯ, ಆಮ್ ಆದ್ಮಿ ಪಾರ್ಟಿಯ (ಎಎಪಿ) ಒಟ್ಟು 62 ಶಾಸಕರ ಪೈಕಿ 45 ಶಾಸಕರು ಹಾಗೂ ಬಿಜೆಪಿಯ 8 ಶಾಸಕರಲ್ಲಿ 7 ಶಾಸಕರು ತಮ್ಮ ಸಂಪತ್ತು 1 ಕೋಟಿ ರೂ.ನಷ್ಟಿದೆ ಎಂದು ನಾಮಪತ್ರ ಸಲ್ಲಿಕೆಯಲ್ಲಿ ಘೋಷಿಸಿಕೊಂಡಿದ್ದಾರೆ. 2015ರ ಚುನಾವಣೆಯಲ್ಲಿ 44 ಶಾಸಕರು ಮಿಲಿಯನೇರ್ಗಳಿದ್ದರು.
ಹೊಸದಾಗಿ ಆಯ್ಕೆಯಾದ ಶಾಸಕರ ಸರಾಸರಿ ಆಸ್ತಿಯ ಮೌಲ್ಯ ₹ 14.29 ಕೋಟಿಯಷ್ಟಿದೆ. ಕಳೆದ ಬಾರಿಯ 2015ರಲ್ಲಿ ಆಯ್ಕೆಯಾದವರ ಆಸ್ತಿ ಸರಾಸರಿ ₹ 6.29 ಕೋಟಿಯಷ್ಟಿತ್ತು ಎಂದು ಹೇಳಿದೆ.
62 ಆಪ್ ಶಾಸಕರ ಸರಾಸರಿ ಆಸ್ತಿಯ ಮೌಲ್ಯ 14.96 ಕೋಟಿ ರೂ.ಯಷ್ಟಿದ್ದು, ಕಳೆದ ವರ್ಷದ 6.29 ಕೋಟಿ ರೂ.ಗಿಂತ ದ್ವಿಗುಣಗೊಂಡಿದೆ. ಆದರೆ, ಬಿಜೆಪಿ ಶಾಸಕರ ಆಸ್ತಿಯ ಮೌಲ್ಯವು ತಲಾ ₹ 9.10 ಕೋಟಿ ರೂ.ಯಷ್ಟಿದೆ.
ಹಲವು ಶಾಸಕರ ವಿರುದ್ಧ ಗಂಭೀರ ಸ್ವರೂಪದ ಅಪರಾಧ, ಅತ್ಯಾಚಾರ, ಕೊಲೆ ಯತ್ನ ಹಾಗೂ ಮಹಿಳೆಯರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊತ್ತ 37 ಶಾಸಕರಿದ್ದಾರೆ. 23 ಶಾಸಕರು ವಿದ್ಯಾರ್ಹತೆ 8ನೇ ತರಗತಿಯಿಂದ 12ನೇ ತರಗತಿವರೆಗೆ ಇದ್ದರೆ 42 ಶಾಸಕರು ಪದವೀಧರರಾಗಿದ್ದಾರೆ. ಉಳಿದ ಐವರು ಡಿಪ್ಲೊಮಾ ಪಡೆದಿದ್ದಾರೆ.