ಮುಂಬೈ: ಸತತ ಎರಡನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯಥಾಸ್ಥಿತಿ ಕಾಯ್ದುಕೊಂಡಿದೆ.
ಸದ್ಯ ರೆಪೋ ದರ ಶೇ.4ರಷ್ಟು ಹಾಗೂ ರಿವರ್ಸ್ ರೆಪೋ ದರ ಶೇ. 3.35 ರಷ್ಟಿದ್ದು, ಇದೇ ಮುಂದುವರೆಯಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಇದರೊಂದಿಗೆ ಆರ್ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ತೆಗೆದುಕೊಂಡಿರುವ ಕೆಲವು ಮಹತ್ತರ ನಿರ್ಧಾರಗಳನ್ನು ಅವರು ಪ್ರಕಟಿಸಿದ್ದಾರೆ.
ಕೋವಿಡ್ ಬಿಕ್ಕಟ್ಟು ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ದೇಶದ ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ.
2021ರಲ್ಲಿ ಶೇ.9.5 ರಷ್ಟು ಜಿಡಿಪಿ ಕುಸಿತ ಸಾಧ್ಯತೆ:
ಕೇಂದ್ರೀಯ ಅಂಕಿ-ಅಂಶಗಳ ಕಚೇರಿ (ಸಿಎಸ್‌ಒ) ಅಂದಾಜಿನ ಪ್ರಕಾರ, ಹಣಕಾಸು ವರ್ಷ 2020ರ ಮೊದಲ ಮೂರು ತಿಂಗಳಲ್ಲೇ ಶೇ. 23.9 ರಷ್ಟು ಜಿಡಿಪಿ(ಆರ್ಥಿಕ ವೃದ್ಧಿ ದರ) ಕುಸಿತ ಕಂಡಿತ್ತು. 2021ರ ಮಾರ್ಚ್ ವೇಳೆಗೆ ನೈಜ ಜಿಡಿಪಿ ಶೇ.9.5 ರಷ್ಟು ಕುಸಿಯುವ ಸಾಧ್ಯತೆಯಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತೀಯ ಆರ್ಥಿಕತೆಯು ನಿರ್ಣಾಯಕ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.