ಮುಂಬೈ:ದೇಶದ ಖಾಸಗಿ ಉದ್ಯಮ ವಲಯವು ಸವಾಲಿನ ಸುಳಿಗೆ ಸಿಲುಕಿಕೊಳ್ಳುತ್ತಿದೆ. ಮುಂದಿನ 18 ತಿಂಗಳುಗಳವರೆಗೆ ಹೂಡಿಕೆ ಸಂಭವಿಸುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಎಲ್ ಆ್ಯಂಡ್ ಟಿ ಮುಖ್ಯಸ್ಥ ಎ.ಎಂ. ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿಗಳ ಮೇಲಿನ ತ್ವರಿತ ಖರ್ಚುಗೆ ವರ್ಷ ಅಥವಾ ಒಂದೂವರೆ ವರ್ಷವಾದರೂ ತೆಗೆದುಕೊಳ್ಳುತ್ತದೆ. ಖಾಸಗಿ ವಲಯವು ಬಂಡವಾಳ ಹೂಡಿಕೆಯ ವಿಷಯದಲ್ಲಿ ಸಂದಿಗ್ದ ಪರಿಸ್ಥಿತಿಗೆ ಸಿಲುಕಿಕೊಂಡಿದೆ. ಮೂರನೇ ಒಂದು ಭಾಗದಷ್ಟು ಉದ್ಯಮಿಗಳು ಮಾತ್ರ ತಮ್ಮಲ್ಲಿರುವ ಹೂಡಿಕೆಯ ಸಂಪತ್ತು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಸಾಲ ಮರುಪಾವತಿಗೆ ಹಲವು ಕಂಪನಿಗಳು ಮಾರಾಟ ಮಾಡಬೇಕಾಗದ ಸ್ಥಿತಿಗೆ ತಲುಪಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.5ರಷ್ಟಾಗಲಿದೆ. ಆದರೆ, ಸರ್ಕಾರ ಶೇ 7ರಷ್ಟು ತಲುಪಿಲಿದೆ ಎಂಬ ಅಂದಾಜು ಇರಿಸಿಕೊಂಡಿದೆ. ಒಂದು ವೇಳೆ ಇದು ಸಾಧ್ಯವಾದರೇ ನಾವೇ ಅದೃಷ್ಟಶಾಲಿಗಳು. ಪ್ರಸ್ತುತ ಪರಿಸ್ಥಿತಿ ಸವಾಲಿನದ್ದಾಗಿದ್ದು, ಸರ್ಕಾರ ಹೇಳುತ್ತಿರುವ ಅಂಕಿಅಂಶಗಳು ಎಷ್ಟರ ಮಟ್ಟಿಗೆ ನಂಬಲರ್ಹವಾಗಿವೆ ಎಂಬ ಅನುಮಾನ ಅವರದ್ದಾಗಿದೆ.
ಉದ್ಯಮದ ಅವಶ್ಯಕತೆಗಳ ಅನುಮತಿ ತ್ವರಿತಗೊಳಿಸಲು ಮತ್ತು ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಈ ಹಿಂದಿನ ಗುಜರಾತ್ ಮಾದರಿಯನ್ನು ಪುನರಾವರ್ತಿಸಬೇಕು. ಗುಜರಾತ್ನಲ್ಲಿ ಮೋದಿ ಸಿಎಂ ಆಗಿದ್ದಾಗ ತಮ್ಮ ಮುಂದೆ ಬರುತ್ತಿದ್ದ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ಕೊಡುತ್ತಿದ್ದರು. ಈಗ ಪ್ರಧಾನಿಯಾಗಿ ಮತ್ತೆ ಅಂತಹ ನಿರ್ಧಾರಗಳತ್ತ ಮೊರೆ ಹೋಗಬೇಕಿದೆ ಎಂದು ನಾಯಕ್ ಸಲಹೆ ನೀಡಿದ್ದಾರೆ.