ಮುಂಬೈ:ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂದಿನ ವಾರ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ ಮೂಲಕ 30,000 ಕೋಟಿ ರೂ. ತೊಡಗಿಸಲಿದೆ.
ಮಾರ್ಚ್‌ನಲ್ಲಿ ತಲಾ 15,000 ಕೋಟಿ ರೂ.ಗಳ ಎರಡು ಕಂತುಗಳಲ್ಲಿ ಒಟ್ಟು 30,000 ಕೋಟಿ ರೂ.ಗೆ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ (ಒಎಂಒ) ಅಡಿಯಲ್ಲಿ ಸರ್ಕಾರಿ ಭದ್ರತೆಗಳನ್ನು ಖರೀದಿಸಲು ಆರ್‌ಬಿಐ ನಿರ್ಧರಿಸಿದೆ ಎಂದು ಕೇಂದ್ರ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹರಾಜು ಪ್ರಕ್ರಿಯೆಯು ಮಾರ್ಚ್ 24 ಮತ್ತು ಮಾರ್ಚ್ 30ರಂದು ನಡೆಯಲಿದೆ ಎಂದು ಹೇಳಿದೆ.
ಕೋವಿಡ್-19 ಸೋಂಕು ಸಂಬಂಧಿತದಿಂದಾಗಿ ಕೆಲವು ಹಣಕಾಸು ಮಾರುಕಟ್ಟೆಯ ವಿಭಾಗಗಳ ತೀವ್ರ ಒತ್ತಡಕ್ಕೆ ಸಿಲುಕಿವೆ. ಹಣಕಾಸಿನ ಪರಿಸ್ಥಿತಿಗಳು ಬಿಗಿಯಾಗುತ್ತಿವೆ. ಎಲ್ಲಾ ಮಾರುಕಟ್ಟೆಗಳ ವಿಭಾಗಗಳು ಸಾಕಷ್ಟು ದ್ರವ್ಯತೆ ಮತ್ತು ವಹಿವಾಟಿನೊಂದಿಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಆರ್‌ಬಿಐನ ಪ್ರಯತ್ನವಾಗಿದೆ ಎಂದು ಹೇಳಿದೆ.
ಇದು ಶೇ 6.84ರಷ್ಟು ಕೂಪನ್ ದರದೊಂದಿಗೆ ಭದ್ರತೆಗಳನ್ನು ಖರೀದಿಸುತ್ತದೆ (ಮುಕ್ತಾಯದ ಅವಧಿಯು 2022ರ ಡಿಸೆಂಬರ್ 19 ), ಶೇ 7.72 ದರ (2025ರ ಮೇ 25), ಶೇ 8.33 ದರ (2026ರ ಜುಲೈ 9) ಮತ್ತು ಶೇ 7.26 ದರದಲ್ಲಿ (2029ರ ಜನವರಿ 14) ಇರಲಿದೆ ಎಂದು ತಿಳಿಸಿದೆ.
ಕಾರ್ಯಾಚರಣೆಗೆ ನಿಗದಿಪಡಿಸಿದ ಒಟ್ಟು 15,000 ಕೋಟಿ ರೂ. ವ್ಯಾಪ್ತಿಯಲ್ಲಿ ಯಾವುದೇ ಸೆಕ್ಯೂರಿಟಿಗಳ ವಿರುದ್ಧ ಯಾವುದೇ ಅಧಿಸೂಚನೆ ಇಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ವೈಯಕ್ತಿಕ ಸೆಕ್ಯೂರಿಟಿಗಳ ಖರೀದಿಯ ಪ್ರಮಾಣವನ್ನು ನಿರ್ಧರಿಸುವ ಒಟ್ಟು ಮೊತ್ತ 15,000 ಕೋಟಿ ರೂ.ಗಿಂತ ಕಡಿಮೆ ಅಥವಾ ಹೆಚ್ಚಿನ ಕೊಡುಗೆಗಳನ್ನು ಸ್ವೀಕರಿಸುವ ಹಕ್ಕನ್ನು ರಿಸರ್ವ್ ಬ್ಯಾಂಕ್ ಹೊಂದಿದೆ.