ಮುಂಬೈ:ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ ಪರವಾನಗಿ ನೀಡುವ ಪ್ರಸ್ತಾಪಕ್ಕೆ ಹಲವು ವಿತ್ತೀಯ ತಜ್ಞರು ಟೀಕೆ ವ್ಯಕ್ತಪಡಿಸಿದ್ದರು. ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಬ್ಯಾಂಕ್ ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ ಪ್ರವೇಶಕ್ಕೆ ಪರವಾನಿಗೆ ನೀಡುವುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದರ ಬಗ್ಗೆ ಎಲ್ಲಾ ಹೇಳಿಕೆ ಪಡೆದು ಇಡೀ ವಿಷಯವನ್ನು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಓದಿ: RBI ಬಡ್ಡಿದರ ಘೋಷಣೆ ಬೆನ್ನಲ್ಲೇ ಸೆನ್ಸೆಕ್ಸ್ ದಾಖಲೆ ಏರಿಕೆ: ಇತಿಹಾಸದಲ್ಲಿ ಇದೇ ಮೊದಲು!
ಇದು ಆರ್‌ಬಿಐನ ಆಂತರಿಕ ಕಾರ್ಯನಿರತ ಗ್ರೂಪ್ನ ಪ್ರಸ್ತಾಪವೇ ಮಾತ್ರ. ಕೇಂದ್ರೀಯ ಬ್ಯಾಂಕಿನ ದೃಷ್ಟಿಕೋನವಲ್ಲ. ಆರ್‌ಬಿಐನ ಕಾರ್ಯನಿರತ ಸಮಿತಿಯ ವರದಿಯಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಇದನ್ನು ಆರ್‌ಬಿಐನ ದೃಷ್ಟಿಕೋನದ ನಿರ್ಧಾರವೆಂದು ನೋಡಬಾರದು. ಅದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಮಿತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದೆ. ಅವರೆಲ್ಲ (ಸಮಿತಿ ಸದಸ್ಯರು) ಸ್ವತಂತ್ರ ಚರ್ಚೆಗಳನ್ನು ವ್ಯಕ್ತಪಡಿಸಿದ್ದಾರೆ. ಒಂದು ನಿರ್ದಿಷ್ಟ ದೃಷ್ಟಿಕೋನ ನೀಡಿದ್ದಾರೆ. ಇದರ ಬಗ್ಗೆ ಆರ್‌ಬಿಐ ಇಲ್ಲಿಯವರೆಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಆಂತರಿಕ ಸಮಿತಿಯ ವರದಿ ಈಗ ಸಾರ್ವಜನಿಕ ವಲಯದಲ್ಲಿದೆ. ನಾವು ಸಲಹೆಗಳನ್ನು ಸ್ವೀಕರಿಸಿ, ಇಡೀ ವಿಷಯವನ್ನು ಪರಿಶೀಲಿಸುತ್ತೇವೆ. ಅಂತಿಮವಾಗಿ ಪರಿಗಣಿತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ದಾಸ್ ತಿಳಿಸಿದರು.
ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ಗಳನ್ನು ಸ್ಥಾಪಿಸಲು ಅನುಮತಿ ನೀಡುವ ಆರ್‌ಬಿಐನ ಆಂತರಿಕ ಕಾರ್ಯ ಸಮಿತಿಯ ಪ್ರಸ್ತಾಪವು 'ಬಾಂಬ್ ಶೆಲ್' ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಡೆಪ್ಯುಟಿ ಗವರ್ನರ್ ವೈರಲ್ ಆಚಾರ್ಯ ವಿರೋಧಿಸಿದ್ದರು.