ಮುಂಬೈ: ಕೋವಿಡ್ 19 ಹಬ್ಬುವಿಕೆಯ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ಡೌನ್ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಿವರ್ಸ್ ರೆಪೊ ದರದಲ್ಲಿ ಮತ್ತಷ್ಟು ಪರಿಷ್ಕರಣೆ ಮಾಡಿದ್ದರಿಂದ ವ್ಯವಸ್ಥೆಯಲ್ಲಿ ದ್ರವ್ಯತೆ ಹೆಚ್ಚಾಗುತ್ತದೆ ಮತ್ತು ಇದೊಂದು ಸಕಾರಾತ್ಮಕ ಕ್ರಮ ಎಂದು ಉದ್ಯಮಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊರಡಿಸಿದ ಪ್ರಕಟಣೆಗಳು ದ್ರವ್ಯತೆ ಪ್ರಮಾಣ ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಸಾಲ ಪೂರೈಕೆಯನ್ನು ಸುಧಾರಿಸುತ್ತದೆ. ಸಣ್ಣ ಉದ್ಯಮ, ಎಂಎಸ್‌ಎಂಇ, ರೈತರು ಮತ್ತು ಬಡವರಿಗೆ ಸಹಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಇಂದಿನ ಪ್ರಕಟಣೆಗಳು ದ್ರವ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ಸಾಲದ ಪೂರೈಕೆಯನ್ನು ಸುಧಾರಿಸುತ್ತದೆ. ಈ ಕ್ರಮಗಳು ನಮ್ಮ ಸಣ್ಣ ಉದ್ಯಮಗಳು, ಎಂಎಸ್‌ಎಂಇ, ರೈತರು ಮತ್ತು ಬಡವರಿಗೆ ಸಹಾಯ ಮಾಡಲಿವೆ. ಇದು ಡಬ್ಲ್ಯುಎಂಎ ಮಿತಿಗಳನ್ನು ಹೆಚ್ಚಿಸುವ ಮೂಲಕ ಎಲ್ಲಾ ರಾಜ್ಯಗಳಿಗೂ ನೆರವಾಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಹೆಚ್ಚುವರಿ ಪುನರ್ರಚನೆಯಿಲ್ಲದೇ ಒಂದು ವರ್ಷದವರೆಗೆ ವಿಳಂಬವಾದ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಸಾಲಗಳನ್ನು ವಿಸ್ತರಿಸಲು ಅವಕಾಶ ನೀಡುವ ಕ್ರಮವು ಡೆವಲಪರ್‌ಗಳಿಗೆ ಹೆಚ್ಚು ಅಗತ್ಯವಾದ ಪರಿಹಾರ ನೀಡಿದಂತಾಗಿದೆ ಎಂದು ಎಸ್ ರಹೇಜಾ ರಿಯಾಲ್ಟಿಯ ನಿರ್ದೇಶಕ ರಾಮ್ ರಹೇಜಾ ಹೇಳಿದರು.