ಮುಂಬೈ:ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಆರ್ಬಿಐ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆಯಿದ್ದರೆ ದರಗಳಲ್ಲಿ ಬದಲಾವಣೆ ಮಾಡುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ.
ವಿತ್ತೀಯ ನೀತಿ ಸಮಿತಿ ರೆಪೋ ದರವನ್ನು ಬದಲಾಯಿಸದಿರಲು ಸರ್ವಸಮ್ಮತವಾದ ನಿರ್ಧಾರ ತೆಗೆದುಕೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಸದ್ಯ ರಿವರ್ಸ್ ರೆಪೋ ದರ ಶೇಕಡಾ 3.35 ರಷ್ಟಿದ್ದು, ರೆಪೋ ದರ ಶೇಕಡಾ 4ರಷ್ಟಿದೆ. ಎರಡೂ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲದೇ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಬ್ಯಾಂಕ್ ದರ ಹಾಗೂ ಎಂಎಸ್ಎಲ್ಆರ್ ದರ ಕೂಡಾ ಮೊದಲಿದ್ದ ಶೇಕಡಾ 4.25ರಲ್ಲೇ ಮುಂದುವರೆಯಲಿದೆ.
ಕೊರೊನಾ ನಂತರದಲ್ಲಿ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವೊಂದು ನೀತಿಗಳನ್ನು ಜಾರಿಗೊಳಿಸಿತ್ತು. ಎರಡು ತಿಂಗಳಿಗೆ ನಡೆಯುವ ವಿತ್ತೀಯ ನೀತಿ ಸಮಿತಿ ಸಭೆ ಈ ಮೊದಲು ಮಾರ್ಚ್ನಲ್ಲಿ ನಡೆದಿದ್ದು, ಆನಂತರ ಮೇ ತಿಂಗಳಲ್ಲಿ ನಡೆದಿತ್ತು. ಎರಡೂ ಸಭೆಗಳಲ್ಲಿ ರೆಪೋ ದರವನ್ನು 115 ಬೇಸಿಸ್ ಪಾಯಿಂಟ್ಗಳಷ್ಟು ಇಳಿಕೆ ಮಾಡಿತ್ತು. ಇದರಿಂದಾಗಿ ಈ ವರ್ಷದ ಫೆಬ್ರವರಿಯಿಂದ 2019ರಿಂದ 250 ಬೇಸಿಸ್ ಪಾಯಿಂಟ್ಗಳಷ್ಟು ರೆಪೋ ದರವನ್ನು ಕಡಿತಗೊಳಿಸಲಾಗಿದೆ.
ಆರ್ಬಿಐನ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯ ಇತರ ಅಂಶಗಳು..
- ಸಾಲದ ಇಎಂಐ ಮರುಪಾವತಿಗೆ ಕಾಲಾವಕಾಶ ನೀಡುವ ಬಗ್ಗೆ ಆರ್ಬಿಐ ಮಾತನಾಡಿಲ್ಲ.
- ಇದರಿಂದಾಗಿ ಆಗಸ್ಟ್ 31ಕ್ಕೆ ಲೋನ್ ಮರೆಟೋರಿಯಂ ಅವಧಿ ಮುಕ್ತಾಯವಾಗುತ್ತದೆ.
- ಬ್ಯಾಂಕ್ಗಳು ಕೂಡಾ ಕಾಲಾವಕಾಶ ಮುಂದುವರೆಸುವುದು ಬೇಡವೆಂದೇ ಹೇಳುತ್ತಿವೆ.
- ರಿಸರ್ವ್ ಬ್ಯಾಂಕ್ನ ವಿತ್ತೀಯ ನೀತಿ ಸಮಿತಿ ಸಭೆ ಅಕ್ಟೋಬರ್ನಲ್ಲಿ ನಡೆಯಲಿದೆ.
- ಚಿನ್ನಾಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿರುವ ರಿಸರ್ವ್ ಬ್ಯಾಂಕ್
- ಸದ್ಯಕ್ಕೆ ಚಿನ್ನದ ಮೌಲ್ಯದ ಶೇ. 75ರಷ್ಟು ಮಾತ್ರ ಸಾಲ ಲಭ್ಯವಿತ್ತು.
- ಇನ್ನು ಮುಂದೆ ಚಿನ್ನದ ಮೇಲೆ ಶೇ. 90ರಷ್ಟು ಸಾಲ ಸಿಗಲಿದೆ.
- ಜಾಗತಿಕ ಆರ್ಥಿಕತೆ ಬಹಳ ದುರ್ಬಲವಾಗಿದೆ. ಆದರೂ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬೆಳವಣಿಗೆ ಗೋಚರಿಸುತ್ತಿದೆ.
- ಚಿಲ್ಲರೆ ಹಣದುಬ್ಬರ ದರ ನಿಯಂತ್ರಣದಲ್ಲಿದೆ. ಇದು ದ್ವಿತೀಯಾರ್ಧದಲ್ಲಿ ಕಡಿಮೆಯಾಗಬಹುದು.
- ದೇಶದ ಆರ್ಥಿಕತೆಯು ಈಗ ಮತ್ತೆ ಹಾದಿಗೆ ಮರಳುತ್ತಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಚೇತರಿಕೆ
- ಆದರೂ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬೆಳವಣಿಗೆಯ ಪ್ರವೃತ್ತಿಯಿಂದ ಆಶಾಭಾವನೆ
- ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕುಗಳಿಂದ ಹಣ ಪಡೆಯುವುದನ್ನು ಕಡಿಮೆ ಮಾಡಲಾಗಿದೆ.
- ಎನ್ಹೆಚ್ಬಿ ಹಾಗೂ ನಬಾರ್ಡ್ನಿಂದ ಹೆಚ್ಚುವರಿ 10 ಸಾವಿರ ಕೋಟಿ ಪಡೆಯಲಾಗಿದೆ.
- ಅರ್ಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರಿಗೆ ಸಾಲ ಒದಗಿಸಲಾಗಿದೆ.
- ಸ್ಟಾರ್ಟ್ ಅಪ್ಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ.
- ಕುಟುಂಬಗಳನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತಲು ಚಿನ್ನದ ಮೇಲಿನ ಸಾಲ ಶೇಕಡಾ 90ಕ್ಕೆ ಹೆಚ್ಚಿಸಲಾಗಿದೆ.