ಮುಂಬೈ: ಕೊರೊನಾ ವೈರಸ್ ಬಿಕ್ಕಟ್ಟಿನಿಂದ ದೇಶಾದ್ಯಂತ ಲಾಕ್ಡೌನ್ ವಿಧಿಸಲಾಗಿದೆ. ಸಾಲ ಮತ್ತು ಇಎಂಐ ಚಿಂತೆಯಲ್ಲಿದ್ದ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿ ಸುದ್ದಿಯೊಂದನ್ನು ನೀಡಿದೆ.
ರಾಷ್ಟ್ರೀಕೃತ, ವಾಣಿಜ್ಯ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿನ ಎಲ್ಲ ಸಾಲಗಳ ಮೇಲಿನ ಬಡ್ಡಿದರವನ್ನು ತಗ್ಗಿಸಿದೆ. ಇದರ ಜೊತೆಗೆ ಮೂರು ತಿಂಗಳವರೆಗೆ ಇಎಂಐಯನ್ನು ಮುಂದೂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ಕೋವಿಡ್ 19 ಸೋಂಕಿನಿಂದಾಗಿ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಂತಹ ಸ್ಥಿತಿಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವೈಯಕ್ತಿಕ, ವಾಹನ, ಗೃಹ, ಚಿನ್ನಾಭರಣ ಸಾಲ, ಹಣಕಾಸು ಸಂಸ್ಥೆಗಳ ಪಡೆದ ಸಾಲ ಸೇರಿದಂತೆ ಎಲ್ಲ ಬ್ಯಾಂಕ್ಗಳಲ್ಲಿ ಪಡೆದಿರುವ ಸಾಲ ಮೇಲಿನ ಇಎಂಐಯನ್ನು ಮುಂದಿನ ಮೂರು ತಿಂಗಳ (ಜೂನ್ ತನಕ) ವರಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಕೊರೊನಾ ಸೋಂಕಿನ ಬಳಿಕ ಆರ್ಥಿಕ ಇಳಿಕೆಯನ್ನು ತಡೆಯುವ ಪ್ರಯತ್ನದ ಭಾಗವಾಗಿ ಆರ್‌ಬಿಐಬಡ್ಡಿ ದರಗಳನ್ನು ಕಡಿತಗೊಳಿಸಿದೆ. ರೆಪೊ ದರವನ್ನು 75 ಮೂಲ ಅಂಕಗಳಷ್ಟು ಹಾಗೂ ರಿವರ್ಸ್ ರೆಪೊ ದರ 100 ಮೂಲ ಅಂಕಗಳಷ್ಟು ಇಳಿಕೆ ಮಾಡಿದೆ.