ವಾಷಿಂಗ್ಟನ್(ಅಮೆರಿಕ):ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿರುವಕ್ರಿಪ್ಟೋ ಕರೆನ್ಸಿ ತ್ವರಿತ ಬೆಳವಣಿಗೆಗೆ ಕಾರಣವಾಗುವುದರ ಜೊತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಆದರೆ ಆರ್ಥಿಕ ಸ್ಥಿರತೆಯ ವಿಚಾರದಲ್ಲಿ ಅನೇಕ ಸವಾಲುಗಳು ಕಾಣಿಸಿಕೊಳ್ಳುತ್ತವೆ ಎಂದು ಐಎಂಎಫ್(IMF) ಎಚ್ಚರಿಕೆ ನೀಡಿದೆ.
ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಗಳಾಗಿವೆ. ಕರೆನ್ಸಿಯ ನಿರ್ವಹಣೆಗೆ ಮತ್ತು ಕರೆನ್ಸಿ ವರ್ಗಾವಣೆಗೆ ಗೂಢಲಿಪಿ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ. ಕೇಂದ್ರ ಬ್ಯಾಂಕ್ನಿಂದ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಮಾಡುವ ಈ ಕ್ರಿಪ್ಟೋ ಕರೆನ್ಸಿ ಇದೇ ಕಾರಣಕ್ಕಾಗಿ ಸವಾಲುಗಳನ್ನು ಸೃಷ್ಟಿ ಮಾಡುತ್ತದೆ ಎನ್ನಲಾಗಿದೆ.
ಕ್ರಿಪ್ಟೋ ವ್ಯವಸ್ಥೆ ಮತ್ತು ಹಣಕಾಸು ಸ್ಥಿರತೆ ಸವಾಲುಗಳು ಎಂಬ ಬಗ್ಗೆ ವರದಿ ನೀಡಿರುವ ಐಎಂಎಫ್ ಈ ತಾಂತ್ರಿಕ ಆವಿಷ್ಕಾರವು ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಇದು ಹಣಕಾಸು ಸೇವೆಗಳನ್ನು ಅತ್ಯಂತ ವೇಗವಾಗಿ ಮತ್ತು ಅಗ್ಗವಾಗಿ ಹಾಗೂ ಸುಲಭವಾಗುವಂತೆ ಮಾಡುತ್ತದೆ. ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆಯಿಂದ ಪಾರದರ್ಶಕತೆಯನ್ನೂ ನಿರೀಕ್ಷೆ ಮಾಡಬಹುದಾಗಿದೆ ವರದಿಯಲ್ಲಿ ಉಲ್ಲೇಖಿಸಿದೆ.