ನವದೆಹಲಿ:ಹೆಚ್ಚುತ್ತಿರುವ ಸರಕುಗಳ ಬೆಲೆ ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, 'ಇದು ಅಭಿವೃದ್ಧಿಯೋ ಅಥವಾ ವಿನಾಶವೋ' ಎಂದು ಪ್ರಶ್ನಿಸಿದ್ದಾರೆ.
ಬ್ಯಾಂಕ್ಗಳು ತೊಂದರೆಯಲ್ಲಿವೆ. ಜಿಡಿಪಿಯೂ ಸಂಕಷ್ಟ ದಲ್ಲಿದೆ. ಹಣದುಬ್ಬರವು ಎಂದಿಗೂ ಹೆಚ್ಚಿರಲಿಲ್ಲ. ನಿರುದ್ಯೋಗವೂ ಹೀಗೆ ಆಗಿರಲಿಲ್ಲ. ಸಾರ್ವಜನಿಕರ ಸ್ಥೈರ್ಯ ಕುಸಿಯುತ್ತಿದೆ. ಸಾಮಾಜಿಕ ನ್ಯಾಯವನ್ನು ಪ್ರತಿದಿನವೂ ಪುಡಿಮಾಡಲಾಗುತ್ತಿದೆ. ಅಭಿವೃದ್ಧಿಯೋ ಅಥವಾ ವಿನಾಶವೋ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಹಣಕಾಸೇತರ ಸಂಸ್ಥೆಗಳ ನಗದು ಬಿಕ್ಕಟ್ಟು, ಯೆಸ್ ಬ್ಯಾಂಕ್ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ಗಳ (ಪಿಎಂಸಿ) ಠೇವಣಿ ವ್ಯಾಜ್ಯದ ಬಳಿಕ ನಿನ್ನೆ ಲಕ್ಷ್ಮಿ ವಿಲಾಸ್ ಬ್ಯಾಂಕ್ನ ಆಡಳಿತ ಮಂಡಳಿ ವಜಾಗೊಳಿಸಿ ಠೇವಣಿ ಹಿಂತೆಗೆತದ ಮೇಲೆ ಕೇಂದ್ರ ನಿರ್ಬಂಧ ಹೇರಿತ್ತು. ಆಹಾರ ಪದಾರ್ಥಗಳ ಚಿಲ್ಲರೆ ಹಣದುಬ್ಬರ ಆರು ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ. ಈ ಎಲ್ಲ ಬೆಳವಣಿಗೆಗಳನ್ನು ಗುರಿಯಾಗಿಸಿ ಕೊಂಡು ಕಾಂಗ್ರೆಸ್ ಟ್ವೀಟ್ ದಾಳಿ ನಡೆಸಿದೆ.
ಕ್ಷೀಣಿಸುತ್ತಿರುವ ಜಿಡಿಪಿ ಮತ್ತು ಆರ್ಥಿಕತೆಯ ಸ್ಥಿತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಗಾಂಧಿ, ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ತನ್ನ ನೀತಿಗಳಿಂದ ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.