ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ 103 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವಿವಿಧ ಕಾರಣಗಳಿಗೆ ದೇಣಿಗೆ ನೀಡಿದ್ದಾರೆ. ಇದರಲ್ಲಿ ಹರಾಜಿನಿಂದ ಮತ್ತು ಅವರ ವೈಯಕ್ತಿಕ ಉಳಿತಾಯದಿಂದ ಬಂದ ಆದಾಯವೂ ಸೇರಿದೆ.
ಪ್ರಧಾನ ಮಂತ್ರಿ ಪಿಎಂ-ಕೇರ್ಸ್ ನಿಧಿಯ ಆರಂಭಿಕ ಕೊಡುಗೆಯಾಗಿ 2.25 ಲಕ್ಷ ರೂ. ದೇಣಿಗೆ ನೀಡಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕದಂತಹ ತುರ್ತು ಆರೋಗ್ಯ ಸಂದರ್ಭ ಎದುರಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ಮಾರ್ಚ್‌ನಲ್ಲಿ ಸ್ಥಾಪಿಸಲಾಯಿತು.
ಬಾಲಕಿಯರ ಶಿಕ್ಷಣ, ಸ್ವಚ್ಛಗಂಗಾ ಮಿಷನ್ ಮತ್ತು ದೀನದಲಿತರ ಕಲ್ಯಾಣಕ್ಕೂ ಪ್ರಧಾನಿ ಕೊಡುಗೆ ನೀಡಿದ್ದಾರೆ ಎಂದು ಮೋದಿ ಅವರ ಆಪ್ತರೊಬ್ಬರು ಹೇಳಿದ್ದಾರೆ.
2019ರಲ್ಲಿ ಮೋದಿ ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ. ಕುಂಭಮೇಳದ ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ದೇಣಿಗೆ ನೀಡಿದ್ದಾರೆ.
ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದ 1.3 ಕೋಟಿ ರೂ. ಮೊತ್ತದ ಬಹುಮಾನವನ್ನು ಗಂಗಾ ನದಿ ಸ್ವಚ್ಛತೆಗೆ ನೆರವಾಗಲು ನಮಾಮಿ ಗಂಗಾ ಯೋಜನೆಗೆ ನೀಡಿದ್ದಾರೆ.
ಇತ್ತೀಚೆಗೆ, ಪ್ರಧಾನ ಮಂತ್ರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೋದಿಯವರು ಪಡೆದ ಸ್ಮಾರಕಗಳ ಹರಾಜು 3.40 ಕೋಟಿ ರೂ. ನಮಾಮಿ ಗಂಗಾ ಯೋಜನೆಗೆ ನೀಡಿದ್ದಾರೆ. ಸ್ವಲ್ಪ ಸಮಯದ ಹಿಂದೆ ಅವರು ಪಡೆದ ಉಡುಗೊರೆಗಳ ಹರಾಜಿನಲ್ಲಿ 8.35 ಕೋಟಿ ರೂ.ಪಡೆದರು, ಅದನ್ನು ಮತ್ತೆ ನಮಾಮಿ ಗಂಗಾ ಮಿಷನ್ಗೆ ಮೀಸಲಿಡಲಾಯಿತು.
ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರಿ ಅಧಿಕಾರಿಗಳ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಮೋದಿ ವೈಯಕ್ತಿಕ ಉಳಿತಾಯದಿಂದ ₹ 21 ಲಕ್ಷ ದೇಣಿಗೆ ನೀಡಿದ್ದರು. ಮುಖ್ಯಮಂತ್ರಿಯಾಗಿ ಪಡೆದ ಎಲ್ಲಾ ಉಡುಗೊರೆಗಳನ್ನು ಹರಾಜು ಮಾಡುವ ಮೂಲಕ ₹ 89.96 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಅದೆಲ್ಲವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ನೀಡಿದ್ದಾರೆ.