ನವದೆಹಲಿ: ತೆರಿಗೆ ಪಾವತಿಯನ್ನು ಉತ್ತೇಜನ ನಿಟ್ಟಿನಲ್ಲಿ ಪ್ರಾಮಾಣಿಕ ತೆರಿಗೆದಾರರಿಗೆ ವಿಶೇಷ ಮಾನ್ಯತೆ ಕಲ್ಪಿಸಲು ಪ್ರಾಮಾಣಿಕ ತೆರಿಗೆದಾರರ ಗೌರವ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಲಿದ್ದಾರೆ.
ಫೆಬ್ರವರಿ 1ರಂದು 2020-21ರ ಬಜೆಟ್ನಲ್ಲಿ 'ತೆರಿಗೆದಾರರ ಚಾರ್ಟರ್' ಜಾರಿಗೆ ತರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಇದು ಶಾಸನಬದ್ಧ ಸ್ಥಾನಮಾನವನ್ನು ಹೊಂದಿರುತ್ತದೆ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಸಮಯಕ್ಕೆ ಅನುಗುಣವಾದ ಸೇವೆಗಳನ್ನು ಖಾತರಿಪಡಿಸುವ ಮೂಲಕ ನಾಗರಿಕರಿಗೆ ಅಧಿಕಾರ ನೀಡುತ್ತದೆ ಎಂದು ಹೇಳಿದ್ದರು.
ಪಾರದರ್ಶಕ ತೆರಿಗೆದಾರರಿಗೆ ಗೌರವದ ಮನ್ನಣೆಯ ವೇದಿಕೆಯನ್ನು ನೇರ ತೆರಿಗೆ ಮಂಡಳಿ ನೀಡಲಿದೆ. ಮುಂಬರುವ ದಿನಗಳಲ್ಲಿ ಸುಧಾರಣೆಗಳ ಪ್ರಯಾಣ ಮತ್ತಷ್ಟು ಮುಂದಕ್ಕೆ ಸಾಗಲಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇತ್ತೀಚಿನ ವರ್ಷಗಳಲ್ಲಿ ನೇರ ತೆರಿಗೆಗಳಲ್ಲಿ ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಕಾರ್ಪೊರೇಟ್ ತೆರಿಗೆ ದರವನ್ನು ಶೇ 30ರಿಂದ 22ಕ್ಕೆ ಇಳಿಸಿತ್ತು. ಹೊಸ ಉತ್ಪಾದನಾ ಘಟಕಗಳಿಗೆ ಟ್ಯಾಕ್ಸ್ ದರವನ್ನು ಶೇ 15ಕ್ಕೆ ಇಳಿಸಿತ್ತು. ಜೊತೆಗೆ ಲಾಭಾಂಶ ವಿತರಣಾ ತೆರಿಗೆಯನ್ನೂ ರದ್ದುಪಡಿಸಲಾಯಿತು.
ತೆರಿಗೆ ದರಗಳನ್ನು ಕಡಿಮೆ ಮಾಡುವುದು ಮತ್ತು ನೇರ ತೆರಿಗೆ ಕಾನೂನುಗಳ ಸರಳೀಕರಣದ ಮೇಲೆ ತೆರಿಗೆ ಸುಧಾರಣೆಗಳು ಕೇಂದ್ರೀಕರಿಸಿದೆ. ಐಟಿ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರಲು ಸಿಬಿಡಿಟಿ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಸಿಬಿಡಿಟಿ ತೆರಿಗೆದಾರರ ಮತ್ತು ಆಡಳಿತದ ನಡುವಿನ ವಿಶ್ವಾಸವನ್ನು ಖಚಿತಪಡಿಸುತ್ತದೆ ಮತ್ತು ಕಿರುಕುಳವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಇಲಾಖೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಸಿಬಿಡಿಟಿ 'ತೆರಿಗೆದಾರರ ಚಾರ್ಟರ್' ಅಳವಡಿಸಿಕೊಳ್ಳಲಿದೆ ಎಂದು ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.