ನವದೆಹಲಿ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ 2024ರ ವೇಳೆಗೆ ಪೈಪ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯ 'ಹರ್ ಘರ್ ಜಲ್' ಯೋಜನೆ ಅನುಷ್ಠಾನಕ್ಕೆ ₹ 7.88 ಲಕ್ಷ ಕೋಟಿ ವೆಚ್ಚ ತಗುಲಲಿದೆ.
'ಹರ್ ಘರ್ ಜಲ್' ಯೋಜನೆ ಜಾರಿಗೆ ತಂದು ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವುದು ಕೇಂದ್ರ ಸರ್ಕಾರದ ಆದ್ಯತೆ. ಈ ದಿಸೆಯಲ್ಲಿ ಪ್ರಮುಖ ಹೆಜ್ಜೆಯಾಗಿ ಜಲ ಶಕ್ತಿ ಸಚಿವಾಲಯವನ್ನು ರೂಪಿಸಲಾಗಿದೆ. ಜಲ್ ಜೀವನ್ ಮಿಷನ್‌ನಡಿ ಪ್ರತಿ ಮನೆಗೆ ನೀರು ಪೂರೈಸಲು ಈ ಸಚಿವಾಲಯವು ರಾಜ್ಯಗಳ ಜತೆಗೆ ಕಾರ್ಯ ನಿರ್ವಹಿಸಲಿದೆ' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಬಜೆಟ್ನಲ್ಲಿ ಘೋಷಿಸಿದ್ದರು.
ರಾಜ್ಯಗಳು ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದ ಯೋಜನಾ ವರದಿಗಳ ಆಧಾರದ ಮೇಲೆ ಮತ್ತು ದೇಶದಲ್ಲಿನ ಪ್ರಸ್ತುತ ಶೇ 18ರಷ್ಟು ಕೊಳವೆ ನೀರಿನ ವ್ಯಾಪ್ತಿಯನ್ನು ಪರಿಗಣಿಸಿ ಯೋಜನಾ ವೆಚ್ಚವನ್ನು ನಿಗದಿಪಡಿಸಲಾಗಿದೆ.