ನವದೆಹಲಿ:ಗಡಿಯಲ್ಲಿ ಚೀನಾದ ಉದ್ಧಟನದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು, ದೇಶವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸಲು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಂದ ವಾಸ್ತವಿಕ ಐಡಿಯಾ ನೀಡುವಂತೆ ಕೋರಿದ್ದಾರೆ.
ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ಪರಿವರ್ತನಾ ನೀತಿಗಳ ವಾಸ್ತವಿಕ ವಿಚಾರಗಳನ್ನು ತಿಳಿಸುವಂತೆ ಇಂದು ಸಂಜೆ ನಡೆದ ವರ್ಚುವಲ್ ಸಂವಾದದಲ್ಲಿ ಪ್ರಧಾನಿ ಅವರು ತಮ್ಮ ಸಂಪುಟದ ಸಚಿವರಿಗೆ ಕೇಳಿಕೊಂಡಿದ್ದಾರೆ.
ಈ ಸಂವಾದದಲ್ಲಿ ಚೀನಾ ಮತ್ತು ಭಾರತದ ಮುಂದಿರುವ ಉತ್ಪಾದನಾ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ. ಇದರಲ್ಲಿ ರಕ್ಷಣಾ ಮತ್ತು ವಿದೇಶಾಂಗ ಸಚಿವರು ಸೇರಿದಂತೆ ಇತರ ಕೆಲವು ಸಚಿವರು ಭಾಗವಹಿಸಿರಲಿಲ್ಲ. ಜೂನ್ 19ರಂದು ಸಚಿವರಿಗೆ ಸಂವಾದದ ಕಾರ್ಯಸೂಚಿಯ ಬಗ್ಗೆ ತಿಳಿಸಲಾಗಿತ್ತು. ಒಬ್ಬರು ಹೊರತುಪಡಿಸಿ ಉಳಿದವರೆಲ್ಲರೂ ಇಕ್ಕಟ್ಟಿನಲ್ಲಿ ಸಿಲುಕಿದ್ದವರಂತೆ ಸಂವಾದದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ.
ಸಭೆಯಲ್ಲಿ ಪೂರ್ವ ತಯಾರಿ ಇಲ್ಲದೆ ಬಂದ ಸಚಿವರನ್ನು ಪ್ರಧಾನಿ ಅವರು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ. 'ಮಂತ್ರಿಗಳೆಂದ್ರೇ ರಾಜ, ರಾಣಿಯವರಂತಲ್ಲ. ರಾಯಲ್ಟಿ (ರಾಯಧನ) ಪಡೆಯುವ ವರ್ಗಕ್ಕೆ ಸೇರಿದವರಲ್ಲ. ಈ ಸ್ಥಾನಕ್ಕೆ ತಲುಪಲು ಎಲ್ಲರೂ (ಮಂತ್ರಿಗಳು) ತಳಮಟ್ಟದಿಂದ ಹೆಣಗಾಡಿದ್ದಾರೆ. ಇನ್ನೂ ಯಾವುದೇ ನವೀನ ಆಲೋಚನೆಗಳು ಹೊರಬರುತ್ತಿಲ್ಲ' ಎಂದು ಪ್ರಧಾನಿ ಅವರು ಸಚಿವರ ಮೇಲೆ ಕಿಡಿಕಾರಿದರು ಎಂದು ಮೂಲಗಳು ಐಎಎನ್ಎಸ್ಗೆ ದೃಢಪಡಿಸಿವೆ.
ಕೋಪಗೊಂಡ ಪ್ರಧಾನಿ ಅವರು, ಇಲಾಖೆಗಳು, ಸಚಿವಾಲಯಗಳು ಅಥವಾ ಅಧಿಕಾರಿಗಳಿಂದ ವಿಚಾರಗಳನ್ನು ಬಯಸುವುದಿಲ್ಲ. ಸಚಿವರು ತಾವು ಕಾರ್ಯಗತಗೊಳಿಸಬಹುದಾದ ಸ್ವಂತ ಮತ್ತು ವಾಸ್ತವಿಕ ವಿಚಾರಗಳನ್ನು ತೆಗೆದುಕೊಂಡು ಬರಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.