ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ, ತಯಾರಿಕೆ, ಪ್ರಚಾರ, ದಾಸ್ತಾನು ಮತ್ತು ಆಮದು ನಿಷೇಧ ವಿಧೇಯಕ ಅಂಗೀಕಾರಗೊಂಡಿದೆ.
ಕಳೆದ ತಿಂಗಳಾಂತ್ಯದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಮಸೂದೆ 2019 ಕಾಯ್ದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಇಂದು (ಸೋಮವಾರ) ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಕಾಯ್ದೆಯನ್ನು ಪಾಸ್ ಮಾಡಲಾಯಿತು.
ಕೇಂದ್ರ ಸರ್ಕಾರವು ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಇ-ಸಿಗರೇಟ್ ನಿಷೇಧದ ಅಧಿಸೂಚನೆ ಹೊರಡಿಸಿತ್ತು. ನಾವು ಇದನ್ನು ಬಹಳ ಪವಿತ್ರ ಉದ್ದೇಶದಿಂದ ಜಾರಿಗೆ ತಂದಿದ್ದೇವೆ. ಇದರಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಇಲ್ಲ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಮಸೂದೆಯ ಬಗ್ಗೆ ಸದನಕ್ಕೆ ತಿಳಿಸಿದರು.
ಮಸೂದೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಕೆಲವು ಸದಸ್ಯರು ತಂಬಾಕು ಲಾಬಿಯ ಒತ್ತಡಕ್ಕೆ ಮಣಿದು ಸರ್ಕಾರ ಈ ಮಸೂದೆಯನ್ನು ಜಾರಿಗೆ ತಂದಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಈ ನಿಷೇಧವನ್ನು ಕಚ್ಚಾ ತಂಬಾಕು ಮತ್ತು ಸಾಂಪ್ರದಾಯಿಕ ಸಿಗರೇಟ್‌ಗಳಿಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ನೂತನ ಕಾಯ್ದೆಯ ಅನ್ವಯ ಇ-ಸಿಗರೇಟ್ ಸಂಬಂಧಿತ ಪುನರಾವರ್ತಿತ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 5 ಲಕ್ಷ ರೂ.ವರೆಗೂ ದಂಡಾರ್ಹ ಶಿಕ್ಷೆ ನಿಗದಿಯಾಗಿದೆ. ಮೊದಲ ಬಾರಿಯ ಅಪರಾಧಕ್ಕೆ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ.