ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಎರಡನೇ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಹಣಿಯಲು ವಿಪಕ್ಷಗಳು ಜಂಟಿ ರಣತಂತ್ರ ರೂಪಿಸಿವೆ.
ಫೆಬ್ರವರಿ 1ರಂದು 2020ನೇ ಸಾಲಿನ ಮುಂಗಡ ಪತ್ರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಕುಸಿಯುತ್ತಿರುವ ಜಿಎಸ್ಟಿ, ಆಟೋಮೊಬೈಲ್ ಉದ್ಯಮ ದಶಕಗಳ ಮಹಾ ಕುಸಿತ, ವಿತ್ತೀಯ ಕೊರತೆಯ ಹೆಚ್ಚಳ, ನಿರೋದ್ಯಗ ಪ್ರಮಾಣದ ಏರಿಕೆಯಂತಹ ಆರ್ಥಿಕ ಸವಾಲುಗಳ ಮಧ್ಯೆಯೂ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಫೆಬ್ರವರಿ 3ರಿಂದ ಆರಂಭವಾಗಲಿರುವ ಬಜೆಟ್ ಮೇಲಿನ ಚರ್ಚಿಯ ವೇಳೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಪ್ರತಿ ಪಕ್ಷಗಳು ಒಗ್ಗೂಡಿವೆ. ಸಿಎಎ, ಎನ್ಆರ್ಸಿ ಜಾರಿ ಬಳಿಕ ದೇಶಾದ್ಯಂತ ನಡೆದ ಪ್ರತಿಭಟನೆ, ಗಲಭೆ ಹಾಗೂ ಗೋಲಿಬಾರ್, ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕತೆಯ ಕಳಪೆ ಸಾಧನೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸಂಬಂಧಿತ ಪ್ರತಿಭಟನೆಗಳು ಮುಂದಿಟ್ಟುಕೊಂಡು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲಿವೆ.
ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ವಿವಿಧ ಪಕ್ಷಗಳು ಈಗಾಗಲೇ ತಮ್ಮ ವೈಯಕ್ತಿಕ ಕಾರ್ಯತಂತ್ರದ ಸಭೆಗಳನ್ನು ನಡೆಸಿವೆ. ಸಾಮಾನ್ಯ ಜನರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರ ಹೇಗೆ ನಿರ್ಲಕ್ಷ್ಯ ತೋರಿದೆ ಎಂಬುದನ್ನು ಜನತೆಯ ಮುಂದಿಡಲು ಜಂಟಿ ಕಾರ್ಯತಂತ್ರದ ಮುಖೇನ ಒಗ್ಗೂಡುತ್ತವೆ ಎಂದು ಮೂಲಗಳು ತಿಳಿಸಿವೆ.