ನವದೆಹಲಿ:2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಿಕೊಡುವ ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ವರದಿ ಬಹಿರಂಗವಾಗಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಲಾದ ಮನೆಗಳಲ್ಲಿ ಕೇವಲ ಶೇ 39ರಷ್ಟು ಮನೆಗಳು ಮಾತ್ರ ಹಸ್ತಾಂತರವಾಗಿವೆ. ಪಿಎಂಎವೈ ಅಡಿಯಲ್ಲಿ ಕೈಗೆಟುಕುವ ದರದಲ್ಲಿ ಮನೆಗಳ ನಿರ್ಮಾಣ ಕಾರ್ಯ ತೆವಳುತ್ತಾ ಸಾಗುತ್ತಿದೆ. ಅನುಮೋದನೆಯಾದ 79 ಲಕ್ಷ ಮನೆಗಳಲ್ಲಿ ಸಿಕ್ಕಿದ್ದು ಶೇ 39ರಷ್ಟು ಮಾತ್ರ ಎಂದು ವರದಿ ತಿಳಿಸಿದೆ.
2022ರೊಳಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಲ್ಲದೆ ಗ್ರಾಮೀಣ ಪ್ರದೇಶದ 1 ಕೋಟಿ ಜನರಿಗೆ ಮುಂದಿನ ಐದು ವರ್ಷಗಳಲ್ಲಿ ಮನೆ ನಿರ್ಮಿಸಿ ಕೊಡುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.