ನವದೆಹಲಿ: ಕೊರೊನಾ ಸಾಂಕ್ರಾಮಿಕ ಪ್ರೇರಿತ ಉದ್ಯೋಗ ನಷ್ಟ ಇನ್ನೂ ತಗ್ಗಿಲ್ಲ. ಕಳೆದ ವರ್ಷದ ಮಾರ್ಚ್ 25ರಂದು ಮಾರಣಾಂತಿಕ ಕೋವಿಡ್-19 ಹಬ್ಬುವುದನ್ನು ತಡೆಯಲು ಲಾಕ್‌ಡೌನ್ ಹೇರಿ ನಾಳೆಗೆ ಒಂದು ವರ್ಷ ಕಳೆಯಲಿದೆ. ಈ ಅವಧಿಯಲ್ಲಿ ಸರ್ಕಾರ ತೆಗೆದುಕೊಂಡ ಉತ್ತೇಜಕ ಕ್ರಮಗಳ ಹೊರತಾಗಿಯೂ ನಿರುದ್ಯೋಗದ ವಿಷವರ್ತುಲದಿಂದ ಭಾರತ ಇನ್ನೂ ಹೊರಬಂದಿಲ್ಲ.
ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸರ್ಕಾರವು ಲಾಕ್‌ಡೌನ್ ವಿಧಿಸಿತ್ತು. ಆದರೆ, ಇದು ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿ ಉದ್ಯೋಗ ನಷ್ಟಕ್ಕೆ ಕಾರಣವಾಯಿತು. ನಂತರ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದು ವಲಸೆ ಕಾರ್ಮಿಕರ ಸರಣಿ ಸಂಕಷ್ಟಗಳ ಬವಣೆಗಳು.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಅಂಕಿ-ಅಂಶಗಳ ಪ್ರಕಾರ, ನಿರುದ್ಯೋಗ ದರವು 2021ರ ಫೆಬ್ರವರಿಯಲ್ಲಿ ಶೇ 6.9ರಷ್ಟು ದಾಖಲಾಗಿದೆ. ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ 7.8ರಷ್ಟು ಮತ್ತು 2020ರ ಮಾರ್ಚ್ನಲ್ಲಿನ ಶೇ 8.8ರಷ್ಟಕ್ಕಿಂತ ಸ್ವಲ್ಪ ಉತ್ತಮವಾಗಿದೆ.
ಇದನ್ನೂ ಓದಿ: ಯುರೋಪ್ನಲ್ಲಿನ ಕೊರೊನಾ 3ನೇ ಅಲೆಗೆ ಬೆಚ್ಚಿದ ಮುಂಬೈ ಪೇಟೆ: 725 ಅಂಕ ಬಿದ್ದ ಸೆನ್ಸೆಕ್ಸ್
ಏಪ್ರಿಲ್‌ನಲ್ಲಿ ನಿರುದ್ಯೋಗ ದರವು ಶೇ 23.5ಕ್ಕೆ ಏರಿತು. ಮೇ ತಿಂಗಳಲ್ಲಿ ಅದು ಶೇ 21.7 ರಷ್ಟಾಗಿತ್ತು. ಜೂನ್‌ನಿಂದ ಪ್ರಾರಂಭವಾಗಿ ಆ ತಿಂಗಳಲ್ಲಿ ಶೇ 10.2ರಷ್ಟಾಗಿ ಮತ್ತು ಜುಲೈನಲ್ಲಿ ಶೇ 7.4ಕ್ಕೆ ಸುಧಾರಿಸಿತು. ನಿರುದ್ಯೋಗ ದರವು ಮತ್ತೆ ಆಗಸ್ಟ್ನಲ್ಲಿ ಶೇ 8.3ಕ್ಕೆ ಏರಿತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಶೇ 6.7ಕ್ಕೆ ಸುಧಾರಿಸಿದೆ ಎಂದು ಸಿಎಂಐಇ ಅಂಕಿಅಂಶಗಳು ತಿಳಿಸಿವೆ.
ಅಕ್ಟೋಬರ್‌ನಲ್ಲಿ ನಿರುದ್ಯೋಗವು ಮತ್ತೆ ಶೇ 7ಕ್ಕೆ ಏರಿತು. ಕಳೆದ ನವೆಂಬರ್‌ನಲ್ಲಿ ಶೇ 6.5ಕ್ಕೆ ಇಳಿಯಿತು. 2020ರ ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಶೇ 9.1ಕ್ಕೆ ಏರಿದ್ದರೆ ಜನವರಿಯಲ್ಲಿ ಶೇ 6.5ರಷ್ಟಾಗಿ ವರ್ಷಪೂರ್ತಿ ಹಾವು-ಏಣಿಯಾಟವಾಡಿತು. ಸಿಎಂಐಇ ದತ್ತಾಂಶದ ಪ್ರಕಾರ ಜುಲೈನಿಂದ ನಿರುದ್ಯೋಗದಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ, ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಮೇಲ್ಮುಖ ಹೆಚ್ಚಳದ ನಂತರವೇ ಸ್ಥಿರತೆಯ ಅವಶ್ಯಕತೆಯಿದೆ. ಕೃಷಿ ಕ್ಷೇತ್ರ ದೇಶದ ಜನಸಂಖ್ಯೆಯ ಶೇ 55ಕ್ಕಿಂತ ಹೆಚ್ಚು ಜನರನ್ನು ತೊಡಗಿಸಿಕೊಂಡಿದೆ. ಆದರೆ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನೇಮಕಾತಿಯ ಸುಧಾರಣೆಯ ಅವಶ್ಯಕತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.