ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಆಡಳಿತಾರೂಢ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿತು. ರಾಷ್ಟ್ರವ್ಯಾಪಿ ಲಾಕ್ಡೌನ್ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಯಾವುದೇ ಆರ್ಥಿಕ ಪ್ಯಾಕೇಜ್ ನೀಡುತ್ತಿಲ್ಲ ಎಂದು ಆರೋಪಿಸಿದೆ.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಸಾಕಷ್ಟು ಉತ್ತೇಜನ ಪ್ಯಾಕೇಜ್ ನೀಡದವರೆಗೂ ರಾಜ್ಯಗಳು ಆಡಳಿತ ನಡೆಸುವುದು ಹೇಗೆ? ನಾವು 10,000 ಕೋಟಿ ರೂ. ಆದಾಯ ಕಳೆದುಕೊಂಡಿದ್ದೇವೆ. ರಾಜ್ಯಗಳು ಪ್ಯಾಕೇಜ್ ನೀಡಿ ಎಂದು ಪ್ರಧಾನಿಗಳನ್ನು ಪದೇ ಪದೆ ಕೋರಿವೆ. ಆದರೆ, ನಾವು ಇನ್ಮುಂದೆ ಕೇಂದ್ರ ಸರ್ಕಾರದಿಂದ ಕೇಳಬೇಕಿಲ್ಲ ಎಂದು ಕಿಡಿಕಾರಿದರು.