ನವದೆಹಲಿ:ಈಶಾನ್ಯ ಭಾಗಕ್ಕೆ ಭಾರತದ ಬೆಳವಣಿಗೆಯ ಎಂಜಿನ್ ಆಗುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಣಿಪುರ ನೀರು ಸರಬರಾಜು ಯೋಜನೆಗೆ ಅಡಿಪಾಯ ಹಾಕಿ ಮಾತನಾಡಿದ ಪ್ರಧಾನಿ, ಈ ಭಾಗದಲ್ಲಿ ಸಂಪರ್ಕ ಸೇತುವೆ ಸುಧಾರಿಸಲು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಈಗ ಶಾಂತಿ ಸ್ಥಾಪಿತವಾಗಿದೆ ಎಂದರು.
ಈಶಾನ್ಯ ಭಾರತವು ದೇಶದ ಬೆಳವಣಿಗೆಯ ಎಂಜಿನ್ ಆಗುವ ಸಾಮರ್ಥ್ಯ ಹೊಂದಿದೆ. ಈಗ ಇಡೀ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗುತ್ತಿದೆ. ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಮಂತ್ರವು ಈಶಾನ್ಯದಲ್ಲಿ ಪ್ರತಿಧ್ವನಿಸುತ್ತಿದೆ. ಮಣಿಪುರದಲ್ಲಿ ದಿಗ್ಬಂಧನಗಳು ಇತಿಹಾಸದ ಒಂದು ಭಾಗವಾಗಿದ್ದರೂ ಅಸ್ಸೋಂ ದಶಕಗಳಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ತ್ರಿಪುರ ಮತ್ತು ಮಿಜೋರಾಂನಲ್ಲೂ ಯುವಕರು ಹಿಂಸೆಯ ಹಾದಿಯನ್ನು ತ್ಯಜಿಸಿದ್ದಾರೆ. ಈಗ ಬ್ರೂ-ರೇಂಗ್ ನಿರಾಶ್ರಿತರು ಉತ್ತಮ ಜೀವನದತ್ತ ಸಾಗುತ್ತಿದ್ದಾರೆ ಎಂದು ಹೇಳಿದರು.
ಮ್ಯಾನ್ಮಾರ್, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದೊಂದಿಗಿನ ನಮ್ಮ ಸಾಮಾಜಿಕ ಮತ್ತು ವ್ಯಾಪಾರ ಸಂಬಂಧ ಬಲಗೊಳ್ಳುತ್ತಿದೆ. ಜೊತೆಗೆ ಆಕ್ಟ್ ಈಸ್ಟ್ ಪಾಲಿಸಿಗೂ ಸಹ ಅಷ್ಟೇ ಮಹತ್ವ ನೀಡಲಾಗುತ್ತಿದೆ. ಭಾರತದ ಈಶಾನ್ಯವು ಒಂದು ರೀತಿಯಲ್ಲಿ ನಮ್ಮ ಪ್ರಾಚೀನ ಪ್ರವೇಶದ್ವಾರವಾಗಿದೆ. ಪೂರ್ವ ಏಷ್ಯಾದೊಂದಿಗಿನ ಸಾಂಸ್ಕೃತಿಕ ಸಂಬಂಧ ಮತ್ತು ವ್ಯಾಪಾರ, ಪ್ರಯಾಣ ಹಾಗೂ ಪ್ರವಾಸೋದ್ಯಮದ ಭವಿಷ್ಯದ ಹಾದಿಯಾಗಿದೆ ಎಂದು ಮೋದಿ ಶ್ಲಾಘಿಸಿದರು.