ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಪ್ರೊಜೆಕ್ಟ್ ನೌಕರರ ವೇತನದಲ್ಲಿ ಯಾವುದೇ ಕಡಿತವಿಲ್ಲ. ಹೊಸ ಪ್ರೊಜೆಕ್ಟ್ ನೌಕರರಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಐಟಿ ದಿಗ್ಗಜ ವಿಪ್ರೋ ಸಂಸ್ಥೆ 'ಈಟಿವಿ ಭಾರತ'ಗೆ ಸ್ಪಷ್ಟಪಡಿಸಿದೆ.
300 ಉದ್ಯೋಗಿಗಳಿಗೆ ಬೆಂಚ್ ಕಾಯಿಸಿದರ ಕುರಿತು ಪುಣೆ ಕಾರ್ಮಿಕ ಆಯೋಗವು ವಿಪ್ರೋಗೆ ನೋಟಿಸ್ ನೀಡಿದೆ ಎಂಬ ವದಂತಿಯ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. 'ಅಂತಹ ಯಾವುದೇ ಘಟನೆ ನಡೆದಿಲ್ಲ. ವೆಚ್ಚ ಕಡಿತ ಮಾಡುವ ನಿರ್ಧಾರ ನಮ್ಮ ಮುಂದೆ ಇಲ್ಲ' ಎಂದು ಎಲ್ಲ ವದಂತಿಗಳಿಗೆ ತೆರೆ ಎಳೆದಿದೆ.
ಉದ್ಯೋಗಿಗಳಿಗೆ ಸಂಬಂಧಿಸಿದ ಊಹಾಪೋಹಗಳು ಆಧಾರ ರಹಿತವಾಗಿವೆ. ಅವುಗಳಿಗೆ ಯಾವುದೇ ಪುರಾವೆಯಿಲ್ಲ. ವಿಪ್ರೊ ಈ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ. ಈಗಾಗಲೇ ಪ್ರೊಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ನೂತನ ಪ್ರೊಜೆಕ್ಟ್ಗಳಿಗಾಗಿ ಎದುರುನೋಡುತ್ತಿರುವ ನೌಕರರಿಗೆ ಯಾವುದೇ ವೇತನ ಕಡಿತವಿಲ್ಲ ಎಂದು 'ಈಟಿವಿ ಭಾರತ'ಗೆ ಇ-ಮೇಲ್ ಮೂಲಕ ಸ್ಪಷ್ಟನೆ ನೀಡಿದೆ.
ವಿಪ್ರೋ ಇದುವರೆಗೂ ಕಾರ್ಮಿಕ ಇಲಾಖೆಯಿಂದ ಯಾವುದೇ ಸಂವಹನದ ಸಾಧನ ಸ್ವೀಕರಿಸಿಲ್ಲ. ಅಗತ್ಯವಿದ್ದಾಗ ಮತ್ತು ಇಲಾಖೆಯ ಮುಂದೆ ಕಂಪನಿಯು ಸತ್ಯವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದೆ.
ವಿಪ್ರೋ ಬೆಂಚಿಂಗ್ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ. ಮಾನವ ಸಂಪನ್ಮೂಲ ನೀತಿಗಳು ನೌಕರ ಸ್ನೇಹಿಯಾಗಿವೆ. ಉದ್ಯೋಗಿಗಳಿಗೆ ಯಾವುದೇ ವೇತನ ಕಡಿತವಾಗುವುದಿಲ್ಲ ಎಂಬ ಸುಳಿವನ್ನು ನೀಡಿದೆ.