ನವದೆಹಲಿ: ಭಾರತದ ವಾರ್ಷಿಕ ಆರ್ಥಿಕ ವಹಿವಾಟು 3 ಟ್ರಿಲಿಯನ್ ಡಾಲರ್ ಇದ್ದು, ನ್ಯಾಯ್ ಯೋಜನೆಗೆ ತಗುಲುವ ವೆಚ್ಚವನ್ನು ಈ ಆರ್ಥಿಕತೆಯಲ್ಲಿ ಭರಿಸಬಹುದಾಗಿದೆ. ಇದಕ್ಕಾಗಿ ಹೊಸ ತೆರಿಗೆ ನೀತಿ ತರುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
ನ್ಯಾಯ್ ಯೋಜನೆ ಬಡತನದ ಮೇಲಿನ ಸರ್ಜಿಕಲ್ ದಾಳಿ ಎಂದು ಕಾಂಗ್ರೆಸ್ ಬಿಂಬಿಸಿದೆ. ಆದರೆ ಈ ಯೋಜನೆಗೆ ಹಣವನ್ನು ಹೊಂದಿಸುವ ಬಗ್ಗೆ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಪ್ರಶ್ನಿಸುತ್ತಿವೆ.
ನ್ಯಾಯ್ ಯೋಜನೆಗೆ ಜಿಡಿಪಿಯ ಶೇ 1.2ರಿಂದ 1.5ರಷ್ಟು ಖರ್ಚು ತಗಲುತ್ತದೆ. ರಾಷ್ಟ್ರದ ವಾರ್ಷಿಕ ಆರ್ಥಿಕ ವಹಿವಾಟು 3 ಟ್ರಿಲಿಯನ್ ಡಾಲರ್ ಇದೆ. ನ್ಯಾಯ್ ಯೋಜನೆಗೆ ತಗಲುವ ವೆಚ್ಚ ಇದರಲ್ಲಿ ಭರಿಸಬಹುದು. ನೂತನ ಆದಾಯ ತೆರಿಗೆ ನೀತಿ ಜಾರಿಗೆ ತರುವ ಅಗತ್ಯವಿಲ್ಲ. ಮಧ್ಯಮ ವರ್ಗದ ಜನರ ಮೇಲೆ ಹೊಸ ತೆರಿಗೆ ಬಿಸಿ ತಟ್ಟುವುದಿಲ್ಲ. ಹಣಕಾಸಿನ ಶಿಸ್ತು ಮೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಈ ಯೋಜನೆಯಿಂದ ಹೊಸ ಕೈಗಾರಿಕೆಗಳು ಹಾಗೂ ಉದ್ಯೋಗಗಳ ಸೃಷ್ಟಿ ಆಗುವ ಸಾಧ್ಯತೆ ಇದೆ. ದೇಶ ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಬಡವರ ಪ್ರಮಾಣ ಶೇ 70ರಷ್ಟು ಇತ್ತು. ಈ ಏಳು ದಶಕದಲ್ಲಿ ಶೇ 20ಕ್ಕೆ ಇಳಿಕೆ ಆಗಿದೆ. ಇದೀಗ ಉಳಿದ ಅಲ್ಪ ಪ್ರಮಾಣದ ಬಡತನವನ್ನು ಹೋಗಲಾಡಿಸುವ ಸಂದರ್ಭ ಬಂದಿದೆ ಎಂದು ಮನಮೋಹನ್ ಹೇಳಿದ್ದಾರೆ.