ನವದೆಹಲಿ: ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಿ ವಾಹನೋದ್ಯಮ ತೆರಿಗೆ ಕಡಿದ ನಿರೀಕ್ಷೆಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 'ವಾಹನ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಮನಸ್ಥಿತಿಯಲ್ಲಿ ಇಲ್ಲ' ಎಂಬುದು ತಿಳಿದುಬಂದಿದೆ.
ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ವಾಹನ ಕ್ಷೇತ್ರಕ್ಕೆ ತೆರಿಗೆ ರಿಯಾಯಿತಿ ನೀಡುವ ಮನಸ್ಥಿತಿಯಲ್ಲಿಲ್ಲ. ಜಿಎಸ್‌ಟಿಯ ಹೆಚ್ಚಿನ ದರದಿಂದಾಗಿ ದೇಶದ ವಾಹನ ವಲಯವು ಹೆಣಗಾಡುತ್ತಿದೆ ಎಂಬ ಅಭಿಪ್ರಾಯವನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.
ವಾಹನಗಳ ಮೇಲಿನ ಜಿಎಸ್‌ಟಿ ದರಗಳು ಜಿಎಸ್‌ಟಿ ಪೂರ್ವದಲ್ಲಿದ್ದ ವ್ಯಾಟ್ ಮತ್ತು ಅಬಕಾರಿ ಸುಂಕದ ದರಕ್ಕಿಂತ ಕಡಿಮೆಯಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲವೊಂದು ತಿಳಿಸಿದೆ.
ಕಳೆದ ಮೂರು ದಶಕಗಳಿಂದ ವಾಹನಗಳ ಮೇಲಿನ ದೇಶದ ತೆರಿಗೆ ನೀತಿ ಸಾಕಷ್ಟು ಸ್ಥಿರವಾಗಿದೆ. ಇದು ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಆಮದುಗಳಿಂದ ಸಮಂಜಸವಾದ ರಕ್ಷಣೆ ನೀಡುವ ಮೂಲಕ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಜಿಎಸ್‌ಟಿ ದರಗಳಿಗಿಂತ ತೆರಿಗೆ ದರ ಹೆಚ್ಚಾಗಿದ್ದರೂ ಜಿಎಸ್‌ಟಿ ಪೂರ್ವದಲ್ಲಿ ಆಟೋಮೊಬೈಲ್ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂಬ ಅಂಶವನ್ನು ಸಚಿವಾಲಯದ ಮೂಲಗಳು ಸೂಚಿಸುತ್ತವೆ. ಅಧಿಕಾರಿಗಳ ಪ್ರಕಾರ, ಇದು ಭಾರಿ ಪ್ರಮಾಣದ ರಾಯಧನದಿಂದ (ರಾಯಲ್ಟಿ) ಸ್ಪಷ್ಟವಾಗಿದೆ. ವಾಹನಗಳ ತಯಾರಕರು ವಿದೇಶದಲ್ಲಿರುವ ತಮ್ಮ ಮೂಲ ಕಂಪನಿಗಳಿಗೆ ಹೆಚ್ಚಿನ ರಾಯಲ್ಟಿ ಪಾವತಿಸುತ್ತಿದ್ದಾರೆ.
ಭಾರತದ ವಾಹನ ವಲಯವು ವಿದೇಶಿ ಉದ್ಯಮಿಗಳ ಪ್ರಾಬಲ್ಯ ಹೊಂದಿದೆ. ಜಪಾನಿನ ವಾಹನ ದೈತ್ಯ ಕಂಪನಿಗಳಾದ ಸುಜುಕಿ, ಟೊಯೋಟಾ, ಹೋಂಡಾ ಮತ್ತು ಕೊರಿಯಾದ ಉತ್ಪಾದಕ ಹ್ಯುಂಡೈ ಉತ್ಪಾದಿಸುವ ಕಾರುಗಳು ದೇಶದ ರಸ್ತೆಗಳಲ್ಲಿ ದಶಕಗಳಿಂದ ಪ್ರಾಬಲ್ಯ ಹೊಂದಿವೆ.