ನವದೆಹಲಿ: ಜಿಎಸ್ಟಿ ಸಂರಚನೆಯಲ್ಲಿ ಪ್ರಮುಖ ಬದಲಾವಣೆ ತರುವ ಅಗತ್ಯವಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಮಾಜಿ ರಾಜ್ಯಸಭಾ ಸದಸ್ಯ ಎನ್.ಕೆ. ಸಿಂಗ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಆದಾಯ ಸಂಗ್ರಹವನ್ನು ಸುಧಾರಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಈಗಿನ ಕಾರ್ಯವಿಧಾನಗಳನ್ನು ಕಡಿಮೆ ಮಾಡಬೇಕು ಮತ್ತು ಆಗಾಗೆ ಸ್ಲ್ಯಾಬ್ ದರದಲ್ಲಿ ಬದಲಾವಣೆ ಮಾಡುವುದನ್ನು ದೂರವಿಡಬೇಕು ಎಂದು ಜಿಎಸ್ಟಿ ಮಂಡಳಿಗೆ ಸಲಹೆ ನೀಡಿದ್ದಾರೆ.
ಆರ್‌ಬಿಐನ ಕೇಂದ್ರ ಕಚೇರಿಯಲ್ಲಿ ಎಲ್.ಕೆ. ಝಾ ಸ್ಮಾರಕ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು ನೀತಿ ಆಯೋಗದ ಪಾತ್ರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ, 'ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಯಾವುದೇ ಅಧಿಕಾರವನ್ನು ಈಗ ಅದು ಹೊಂದಿಲ್ಲ ಎಂದು ಎಚ್ಚರಿಕೆ ನೀಡಿದರು.
ತೆರಿಗೆ ಸಂಪನ್ಮೂಲ ಅಂದಾಜಿಸಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವರಮಾನ ಹಂಚಿಕೆ ಮಾಡುವ ಸೂತ್ರದ ಕುರಿತು ಈ ಆಯೋಗವು ವರದಿ ನೀಡುತ್ತದೆ. ಆಯೋಗವು ಸಾಮಾನ್ಯವಾಗಿ ಎರಡು ವರ್ಷಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಆಯೋಗವು ಈ ಬಾರಿ ತೆರಿಗೆ ವ್ಯವಸ್ಥೆ ಜಿಎಸ್ಟಿ ಪರಿಣಾಮಗಳನ್ನು ಪರಿಗಣೆಗೆ ತೆಗೆದುಕೊಳ್ಳುತ್ತಿದೆ. ನವೆಂಬರ್ 30ರ ಒಳಗೆ ತನ್ನ ವರದಿಯನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಲಿದ್ದು, ಕೇಂದ್ರಕ್ಕೆ ಈ ವರದಿ ಮಹತ್ವದಾಗಿದೆ.