ನವದೆಹಲಿ:ಭಾರತದಲ್ಲಿ ಬಂಡವಾಳದ ಮೇಲಿನ ವೆಚ್ಚದ ಪ್ರಮಾಣ ಅತ್ಯಧಿಕವಾಗಿದೆ. ನಮ್ಮಲ್ಲಿ ನೈಜ ವೆಚ್ಚದ ಪ್ರಮಾಣ ಶೇ 6 ರಷ್ಟಿದ್ದರೆ, ಚೀನಾದಲ್ಲಿ ಶೇ 2ಕ್ಕಿಂತ ಕಡಿಮೆ ಇದೆ ಎಂದು ನೀತಿ ಆಯೋಗದ ಉಪಾಧ್ಯಕ್ಷರು ಅಭಿಪ್ರಾಯಪಟ್ಟರು.
ನೀತಿ ಆಯೋಗವು ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯನ್ನು ರೂಪಾಂತರಿಸಿ ಮತ್ತಷ್ಟು ಪಾರದರ್ಶಕತೆ ತರಲಿದೆ. ನಮ್ಮ ಮುಂದಿನ ಆರ್ಥಿಕತೆ ಯೋಜನೆಗಳ ಪ್ರಮುಖ ಅಜೆಂಡಾ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವುದು ಎಂದು ಅವರು ತಿಳಿಸಿದರು.
ಉದ್ಯೋಗಗಳ ಸೃಷ್ಟಿ, ಕೃಷಿಯ ಆಧುನೀಕರಣ ಹಾಗೂ ರಫ್ತು ಉತ್ತೇಜನದತ್ತ ನೂತನ ಸರ್ಕಾರವು ಹೊಸ ಮಾರ್ಗಗಳನ್ನು ಕಂಡುಕೊಳ್ಳುವತ್ತ ಯೋಚಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ನೂತನ ಸರ್ಕಾರಕ್ಕೆ ಸಲಹೆ ಕೊಟ್ಟರು.
ಹೊಸ ಸರ್ಕಾರದ ರಚನೆಯ ನಂತರ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಅನಾವರಣಗೊಳ್ಳಲಿದೆ. ಖಾಸಗಿ ಹೂಡಿಕೆಯ ಪುನಶ್ಚೇತನ ಮತ್ತು ಕ್ರೆಡಿಟ್ ಲಭ್ಯತೆ ಸುಧಾರಿಸಲು ಗಮನಹರಿಸಬೇಕು ಎಂದು ಕುಮಾರ್ ಹೇಳಿದರು.
ಗೃಹ ನಿರ್ಮಾಣ ಹಣಕಾಸು ಸೇವಾ ಕಂಪೆನಿಗಳ ಸಾಲ ನೀಡಿಕೆ ಶೇ 20ರಷ್ಟು ಕಡಿಮೆಯಾಗಿದ್ದು, ಕಳವಳ ಮೂಡಿಸುವಂತಿದೆ. ಬಜೆಟ್ನಲ್ಲಿ ಈ ಬಗ್ಗೆ ಹಣಕಾಸು ಸಚಿವಾಲಯ ಗಮನಹರಿಸಬೇಕು ಎಂದು ಎಚ್ಚರಿಕೆ ನೀಡಿದರು.