ನವದೆಹಲಿ: ಭಾರತದ ಇಂಧನ ಚಿಲ್ಲರೆ ಮಾರುಕಟ್ಟೆಯ ನೂತನ ಉದಾರೀಕರಣ ನೀತಿಯಡಿ, ದೇಶವ್ಯಾಪಿ ಕನಿಷ್ಠ 100 ಪೆಟ್ರೋಲ್ ಬಂಕ್‌ಗಳನ್ನು ತೆರೆಯಲಾಗುತ್ತಿದ್ದು, ಇದರಲ್ಲಿ ಶೇ 5 ರಷ್ಟು ಬಂಕ್ಗಳು ಗ್ರಾಮೀಣ ಭಾಗದಲ್ಲಿ ತಲೆಎತ್ತಲಿವೆ.
ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸುವ ಮಾನದಂಡಗಳ ಗೆಜೆಟ್ ಅಧಿಸೂಚನೆ ಅನ್ವಯ, ಪರವಾನಗಿ ಪಡೆದವರು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ), ಜೈವಿಕ ಇಂಧನ, ದ್ರವೀಕೃತ ನೈಸರ್ಗಿಕ ಅನಿಲ, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ನಂತಹ ಕನಿಷ್ಠ ಒಂದಾದರೂ ಹೊಸ ಪೀಳಿಗೆಯ ಪರ್ಯಾಯ ಇಂಧನಗಳನ್ನು ಮಾರಾಟ ಮಾಡಬೇಕು ಎಂದು ಸೂಚಿಸಿದೆ.
ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಕಳೆದ ತಿಂಗಳು ನಿಯಮಗಳನ್ನು ಸಡಿಲಗೊಳಿಸಿತ್ತು. ತೈಲೇತರ ಕಂಪೆನಿಗಳು ವೇಗವಾಗಿ ಬೆಳೆಯುತ್ತಿರುವ ಇಂಧನ ಕ್ಷೇತ್ರದಲ್ಲಿ ಸುಲಭವಾಗಿ ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಲು ಇಂತಹ ನಿರ್ಧಾರಕ್ಕೆ ಬರಲಾಗಿತ್ತು.
ಇದಕ್ಕೂ ಮೊದಲು ಭಾರತದ ಇಂಧನದ ಚಿಲ್ಲರೆ ಮಾರುಕಟ್ಟೆಯ ಪರವಾನಿಗೆ ಪಡೆಯಲು ಒಂದು ಕಂಪನಿಯು 2,000 ಕೋಟಿ ರೂ.ನಷ್ಟು ಬಂಡವಾಳ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಪೈಪ್‌ಲೈನ್‌ಗಳು ಅಥವಾ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಟರ್ಮಿನಲ್‌ಗಳಲ್ಲಿ ಹೂಡಿಕೆ ಮಾಡಬೇಕಿತ್ತು.
ಚಿಲ್ಲರೆ ವ್ಯಾಪಾರೋದ್ಯಮಕ್ಕೆ ಅನುಮತಿ ಪಡೆಯಲಿಚ್ಛಿಸುವ ಯಾವುದೇ ಕಂಪನಿ ಅಥವಾ ಘಟಕ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 250 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರಬೇಕು. ಅರ್ಜಿ ಶುಲ್ಕ 25 ಲಕ್ಷ ರೂ. ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ.