ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ ವಿಧಿಸಿರುವ ಹೆಚ್ಚುವರಿ ಸುಂಕ ದೇಶದಲ್ಲಿ ಉದ್ಯೋಗಗಳನ್ನು ಕೊಲ್ಲಿಸುತ್ತಿವೆ ಎಂದು ಆರೋಪಿಸಿರುವ ಅಮೆರಿಕದ ಪಾದರಕ್ಷೆ ಕಂಪನಿಗಳು ಅಧಿಕ ಸುಂಕ ನೀತಿ ಕೈಬಿಡುವಂತೆ ಒತ್ತಾಯಿಸುತ್ತಿವೆ.
ಕಳೆದ ವಾರ ಚೀನಾದಿಂದ ಆಮದಾಗುವ ಸರುಕುಗಳ ಸುಂಕ ಏರಿಕೆ ಮಾಡಿರುವ ಟ್ರಂಪ್ ಆಡಳಿತ ಅದನ್ನು ಏರಿಸುತ್ತಲೇ ಬರುತ್ತಿದೆ. ಕೆಲ ಸರುಕಗಳ ಮೇಲಿನ ಆಮದು ಸುಂಕ ಶೇ 25 ತಲುಪಿದೆ. ಪರಿಣಾಮ ದೇಶದಲ್ಲಿ ಡಿಸೆಂಬರ್‌ವರೆಗೆ ತಲುಪಬೇಕಾದ ಆಯ್ದ ಸರಕುಗಳ ಪೈಕಿ ಮುಖ್ಯವಾಗಿ ಲ್ಯಾಪ್ಟಾಪ್, ಮೊಬೈಲ್ ಫೋನ್ ಮತ್ತು ಕೆಲ ಶೂ ಮಾರಾಟದಲ್ಲಿ ಹಿನ್ನಡೆ ಉಂಟಾಗಿದೆ.
ಹೊಸ ಸುಂಕ ನೀತಿಯಿಂದಾಗಿ ಅಮೆರಿಕದ ಗ್ರಾಹಕರಿಗೆ ವಾರ್ಷಿಕ 4 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ. ಇದು ಆರ್ಥಿಕ ಕುಸಿತದ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಪ್ರಮುಖ ಶೂ ಬ್ರಾಂಡ್‌ಗಳಾದ ನೈಕಿ ಮತ್ತು ಫೂಟ್ ಲಾಕರ್ ಸೇರಿದಂತೆ 200ಕ್ಕೂ ಹೆಚ್ಚು ಪಾದರಕ್ಷೆ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಎಚ್ಚರಿಸಿದ್ದಾರೆ.
ಈ ಬಗ್ಗೆ ಟ್ರಂಪ್ ಅವರಿಗೆ ಪತ್ರ ಬರೆದಿರುವ ವ್ಯಾಪಾರಿಗಳು, ಸುಂಕ ಏರಿಕೆಯಿಂದ ಅಮೆರಿಕನ್ನರು ವಸ್ತುಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಆರಂಭದಿಂದಲೇ ಶ್ವೇತಭವನದ ಗಮನಕ್ಕೆ ತಂದಿದ್ದೇವೆ. ಈಗಾಗಲೇ ನಮ್ಮಲ್ಲಿನ ಹೆಚ್ಚಿನ ಆಮದು ತೆರಿಗೆ ನೀತಿ ನಮ್ಮ ಉದ್ಯೋಗಕ್ಕೆ ಕೊಲೆಗಾರನಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.