ಭೋಪಾಲ್: ಕಾಂಗ್ರೆಸ್ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಈಗ ಕೊಟ್ಟ ಮಾತನ್ನು ಈಡೇರಿಸುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಮುಖಂಡರೇ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಇದರ ಜೊತೆಗೆ ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರದ ವೇಳೆಯಲ್ಲಿ 2018ರ ಡಿಸೆಂಬರ್ 18ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಘಡ ರೈತರ ಸಾಲ ಮನ್ನಾವನ್ನು ಅಧಿಕಾರಕ್ಕೆ ಬಂದ 10 ದಿನಗಳ ಒಳಗೆ ಈಡೇರಿಸುವುದಾಗಿ' ಆಶ್ವಾಸನೆ ನೀಡಿದ್ದರು.
ಮಧ್ಯಪ್ರದೇಶದ ಸಚಿವ ಗೋವಿಂದ್ ಸಿಂಗ್ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೀಡಿದ್ದ ಭರವಸೆ ವಿರುದ್ಧ ಮಾತನಾಡಿದ್ದಾರೆ. 'ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಯಂತೆ ರೈತ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲ. ಈಗ ಪರಿಸ್ಥಿತಿ ಕಷ್ಟಕರವಾಗಿದೆ. ಅದಕ್ಕಾಗಿಯೇ ಸಾಲವನ್ನು ಮನ್ನಾ ಮಾಡಲು ವಿಳಂಬವಾಗಿದೆ ಎಂದು ಹೇಳಿದರು.
ನಾವು ಸರ್ಕಾರ ರಚಿಸಿದ ನಂತರ ನಾವು 10 ದಿನಗಳಲ್ಲಿ 2 ಲಕ್ಷ ರೂ.ವರೆಗಿನ ರೈತ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಅದು ನಮಗೆ ಸಾಧ್ಯವಾಗಲಿಲ್ಲ. ನಾವು ನಿಮಗೆ ದ್ರೋಹ ಬಗೆದಿದ್ದೇವೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಪರಿಸ್ಥಿತಿ ಕಷ್ಟ ಎಂದು ನಾನು ಹೇಳಲು ಬಯಸುತ್ತೇನೆ ಅದಕ್ಕಾಗಿಯೇ ಸಾಲಗಳನ್ನು ಮನ್ನಾ ಮಾಡಲು ವಿಳಂಬವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.