2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯದೊಂದಿಗೆ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರ್ಕಾರ ಶತದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೀಗೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ದೇಶದ ಕೋಟ್ಯಾಂತರ ಕನುಸುಗಳ ಸಾಕಾರದ ಜವಾಬ್ದಾರಿ ಮೋದಿ ಹೆಗಲ ಮೇಲೆ ಬಿತ್ತು. 130 ಕೋಟಿ ಜನರು ಕಂಡ ಬೆಟ್ಟದಷ್ಟು ಕನಸುಗಳನ್ನು ಸಾಕಾರಗೊಳಿವುದು ಅಷ್ಟೇನೂ ಸುಲಭ ಸಾಧ್ಯವಲ್ಲ. ಹೀಗೆ ಅಧಿಕಾರದ ಖುರ್ಚಿಯಲ್ಲಿ ಕುಳಿತುಕೊಂಡ ಮೋದಿ ಇವತ್ತು ಸೆಂಚುರಿ ಬಾರಿಸಿದ್ರು ನಿಜ. ಹಾಗಾದ್ರೆ, ಅವರು ಈ ನೂರು ದಿನಗಳಲ್ಲಿ ಮಾಡಿದ್ದೇನು? ದೇಶದ ಅರ್ಥವ್ಯವಸ್ಥೆಯ ಇಂದಿನ ಚಿತ್ರಣ ಹೇಗಿದೆ? ಆರ್ಥಿಕ ಬೆಳವಣಿಗೆಗೆ ಚೈತನ್ಯ ಒದಗಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಹೀಗೆ ಹಿಂದಿನ ಬೆಳವಣಿಗೆಗಳು, ತೆಗೆದುಕೊಂಡ ಕ್ರಮಗಳು ಹಾಗು ಭವಿಷ್ಯದ ಬಗೆಗೆ ಮುನ್ನೋಟ ಹರಿಸುವ ಪ್ರಯತ್ನ ಇಲ್ಲಿದೆ.
ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ವೇಳೆ ದೇಶದ ಹಣಕಾಸು ನಿಯಂತ್ರಣ ಮತ್ತು ಜಾಗತಿಕ ಅರ್ಥವ್ಯವಸ್ಥೆಯ ಸಂದಿಗ್ಧತೆ ಧುತ್ತೆಂದು ಎದುರಾಗಿತ್ತು. ಅಷ್ಟೇ ಅಲ್ಲ, ದೇಶದೆಲ್ಲೆಡೆ ಹಣಕಾಸೇತರ ಸಂಸ್ಥೆಗಳು ತೀವ್ರ ನಗದು ಕೊರತೆಯನ್ನು ಅನುಭವಿಸೋಕೆ ಶುರುಮಾಡಿದವು. ಮೂಲಸೌಕರ್ಯ ಕ್ಷೇತ್ರ ಆರ್ಥಿಕ ಹಿಂಜರಿತದ ಹೊಡೆತಕ್ಕೆ ನಲುಗಿ ಸಂಕಷ್ಟಕ್ಕೆ ತುತ್ತಾಗಿದ್ದೇ ಇದಕ್ಕೆ ಮೂಲ ಕಾರಣ. ಇಂದಿಗೂ ಸಾರ್ವಜನಿಕ ವಲಯದ ಬ್ಯಾಂಕ್ಗಳ ದ್ರವ್ಯತೆ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಇದು ದೇಶದ ಆಂತರಿಕ ತೊಂದರೆಗಳಾದ್ರೆ, ಬಾಹ್ಯ ಸಮಸ್ಯೆಗಳೇನೂ ಕಡಿಮೆ ಇಲ್ಲ. ಅಮೆರಿಕ- ಚೀನಾ ನಡುವಿನ ವಾಣಿಜ್ಯ ಸಮರ (Trade War) ತಾರಕಕ್ಕೇರಿದ್ರೆ, ಜಾಗತಿಕ ಆರ್ಥಿಕ ಅಸ್ಥಿರತೆಯೂ ಬಲವಾದ ಪೆಟ್ಟನ್ನೇ ಇವತ್ತಿಗೂ ಕೊಡುತ್ತಿದೆ.
ಕೃಷಿ ಕ್ಷೇತ್ರದ ಪ್ರಗತಿ ಹೇಗಿದೆ?
ಈಗ ಕೃಷಿ ಕ್ಷೇತ್ರಕ್ಕೆ ಬರೋಣ. ಕೃಷಿ ಚಟುವಟಿಗಳಲ್ಲಿ ಬಹಳ ಮುಖ್ಯವಾಗಿ ರೈತರ ಆದಾಯ ವೃದ್ಧಿಸುವ ಮೂಲಕ ಅನ್ನದಾತರಿಗೆ ಚೈತನ್ಯ ನೀಡುವುದು ಅನೇಕ ವರ್ಷಗಳಿಂದ ಬಹುದೊಡ್ಡ ಸವಾಲಾಗಿ ಕಾಡುತ್ತಿದೆ. ಹಾಗಂತ ಸರ್ಕಾರಗಳು ಸುಮ್ಮನೆ ಕುಳಿತಿಲ್ಲ ಅನ್ನೋದು ಕೂಡ ನಿಜವಾದೇ ಮಾತೇ. ಹಣಕಾಸು ಬಿಕ್ಕಟ್ಟನ್ನು ಸೂಕ್ತ ರೀತಿಯ ಹಣಕಾಸು ನೀತಿಗಳೊಂದಿಗೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ ನಿಜ. ಹಾಗಿದ್ರೂ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ಕೊಂಡೊಯ್ದು, ವಿತ್ತೀಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ನೀತಿಗಳೆಲ್ಲಾ ನಿರೀಕ್ಷಿತ ಮಟ್ಟದಲ್ಲಿ ಯಶ ಕಂಡಿಲ್ಲ. ಇನ್ನು ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಕೂಡಾ ಮಾರುಕಟ್ಟೆ ಭಾವನೆಗಳನ್ನು ಆಕರ್ಷಿಸುವಲ್ಲೂ ಅಷ್ಟೇನೂ ಸಫಲವಾಗಿಲ್ಲ ಎಂದೇ ಹೇಳಬೇಕು.
ಆರ್ಥಿಕ ಹಿಂಜರಿತದ ದಾಪುಗಾಲು:
ಮೋದಿ 2.0 ಸರ್ಕಾರ ಮೂರು ತಿಂಗಳ ಆಡಳಿತಾವಧಿ ಮುಗಿಸುತ್ತಿದ್ದಂತೆ ಆರ್ಥಿಕ ಹಿಂಜರಿತದ ಸ್ಪಷ್ಟ ಚಿತ್ರಣ ಎನ್ಡಿಎಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಗ್ರಾಹಕ ದಿನ ಬಳಕೆ ವಸ್ತು ಆಧಾರಿತ ಕಾರ್ಖಾನೆಗಳು ಹಾಗೂ ಆಟೋಮೊಬೈಲ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಳನ್ನು ಕಡಿತಗೊಳಿಸುತ್ತಿದೆ. ದೇಶಾದ್ಯಂತ ವಾಹನ ತಯಾರಿಕಾ ಕ್ಷೇತ್ರವೊಂದೇ ಸುಮಾರು 3.50 ಲಕ್ಷ ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಈ ಬೆಳವಣಿಗೆ ನಡೆದಿದ್ದು 2019ರ ಏಪ್ರಿಲ್ ಮತ್ತು ಆಗಸ್ಟ್ ನಡುವಿನ ವೇಳೆಯಲ್ಲಿ ಅಂದ್ರೆ ನಿಮಗೆ ಅಚ್ಚರಿಯಾಗಲೇಬೇಕು. ಇನ್ನು ಆತಂಕದ ವಿಚಾರ ಏನಪ್ಪಾ ಅಂದ್ರೆ, ಅತ್ಯಂತ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ಕ್ಷಿಪ್ರ ವೇಗದಲ್ಲಿ ಬೆಳವಣಿಗೆ ಹೊಂದಬೇಕಿತ್ತು. ಆದ್ರೆ, ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೇವಲ ಶೇ10 ರಷ್ಟು ಅಭಿವೃದ್ದಿ ಕಂಡಿದೆಯಷ್ಟೇ. ಇದಕ್ಕಿಂತಲೂ ಹೆಚ್ಚು ಆತಂಕದ ವಿಚಾರ ಎಂದರೇ ದೇಶಾದ್ಯಂತ ಹೆಸರು ಮಾಡಿದ ಪಾರ್ಲೇ ಬಿಸ್ಕೆಟ್ ಸಂಸ್ಥೆಯ ದುಸ್ಥಿತಿ. ಗ್ರಾಮೀಣ ಭಾಗ ಹಾಗೂ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇವೆ ಒದಗಿಸುತ್ತಿದ್ದ ಪಾರ್ಲೆ ಸಂಸ್ಥೆಯು ತನ್ನ ಒಟ್ಟು ಉದ್ಯೋಗಿಗಳ ಪೈಕಿ 10 ನೇ 1ರಷ್ಟು ಉದ್ಯೋಗವನ್ನು ಕಡಿತಗೊಳಿಸಿದೆ. ತನ್ನ ಉತ್ಪಾದನೆಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಯ್ತು ಎಂದು ಸಂಸ್ಥೆ ಸಬೂಬು ನೀಡಿದೆ. ಇದು ಪಾರ್ಲೆ ವೇದನೆ ಮಾತ್ರವಲ್ಲ. ದಿನಬಳಕೆ ವಸ್ತುಗಳಾದ ಸೋಪು, ಸಾಂಬಾರ ಪದಾರ್ಥಗಳು ಮತ್ತು ಟೀ ವ್ಯವಹಾರವೆಲ್ಲವೂ ದೇಶದ ಬಡ, ಮಧ್ಯಮ ವರ್ಗದ ಅನಭೋಗದ ಸಾಮರ್ಥ್ಯವನ್ನೇ ಅವಲಂಬಿಸಿದೆ. ಈ ಎಲ್ಲಾ ಉತ್ಪನ್ನಗಳಿಗೂ ದೇಶದೆಲ್ಲೆಡೆ ಬರಬರುತ್ತಾ ಬೇಡಿಕೆ ಕಡಿಮೆಯಾಗುತ್ತಿದೆ.