ನವದೆಹಲಿ:ಎಸ್‌ಬಿಐ, ಐಡಿಬಿಐ ಮತ್ತು ಇತರ ಬ್ಯಾಂಕ್ಗಳಿಂದ 9,000 ಕೋಟಿ ರೂ. ಮೌಲ್ಯದಷ್ಟು ಸಾಲ ಪಡೆದು ಮರುಪಾವತಿಸದೆ ಪರಾರಿಯಾದ ಮದ್ಯದ ದೊರೆ ವಿಜಯ್ ಮಲ್ಯ ಅವರು 'ಸಾಲ ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ' ಎಂದರೂ ಯಾವುದೇ ಬ್ಯಾಂಕ್ಗಳು ಒಪ್ಪಿಕೊಳ್ಳುತ್ತಿಲ್ಲ ಎಂದು ಉನ್ನತ ಬ್ಯಾಂಕರ್ ಒಬ್ಬರು ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು 2016ರಲ್ಲಿ ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲು ಒತ್ತಡ ಹೇರುತ್ತಿದ್ದಂತೆ, ಮಲ್ಯ ದೇಶದಿಂದ ಪಲಾಯನಗೈದರು.
ಇಂಗ್ಲೆಂಡ್ನಲ್ಲಿರುವ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರ ನಡುವೆ ರಾಜಿ- ಸಂಧಾನದ ಮೂಲಕ ಸಾಲದ ವಿವಾದ ಇತ್ಯರ್ಥ ಪಡಿಸಿಕೊಳ್ಳಲು, ತಮ್ಮ ಸಾಲಕ್ಕೆ ಸಂಬಂಧಿಸಿದಂತೆ 13,960 ಕೋಟಿ ರೂ. ಸೆಟ್ಲ್ಮೆಂಟ್ ಪ್ಯಾಕೇಜ್ ಆಹ್ವಾನವನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಬ್ಯಾಂಕ್ನಿಂದ 9,000 ಕೋಟಿ ರೂ. ಸಾಲಪಡೆದು ಸುಸ್ತಿದಾರರನಾಗಿರುವ ಮಲ್ಯ, ಸಾಲ ತೀರಿಸುವುದಾಗಿ ಹೇಳುತ್ತಲೇ ಬಂದಿದ್ದು, ಈಗ ಸಾಲದ ಮೊತ್ತವನ್ನು ಸಹ ಸೂಚಿಸಿದ್ದಾರೆ. ಆದರೆ, ಬ್ಯಾಂಕ್ಗಳು ಅವರ ಮನವಿಯನ್ನು ತಿರಸ್ಕರಿಸಿವೆ. 'ತೆಗೆದುಕೊಂಡ ಸಾಲ ತೀರಿಸುತ್ತೇನೆ ಎಂದರೂ ಬ್ಯಾಂಕ್ಗಳು ತಮ್ಮ ಮನವಿ ಪುರಸ್ಕರಿಸುತ್ತಿಲ್ಲ' ಎಂದು ಮಲ್ಯ ಆಪಾದಿಸಿಕೊಂಡು ಬರುತ್ತಿದ್ದಾರೆ.