ನವದೆಹಲಿ: ಉದ್ದೇಶಪೂರ್ವಕ ಸಾಲ ಬಾಕಿದಾರರ 68,000 ಕೋಟಿ ರೂ. ಸಾಲ ರೈಟ್ ಆಫ್ ಮಾಡಿದ ಎನ್ಡಿಎ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
"ಸಾಲದ ರೈಟ್ ಆಫ್ ಎಂದರೆ ಸಾಲ ಮನ್ನಾ ಅಲ್ಲ, ವಾಪಸು ಬಾರದ ಸಾಲಗಳನ್ನು ಲೆಕ್ಕದ ಪುಸ್ತಕಗಳಿಂದ ಮಾತ್ರ ಹೊರಗಿಡಲಾಗಿದೆ. ಈ ಮಧ್ಯೆ ಬಾಕಿದಾರರಿಂದ ಸಾಲ ವಸೂಲಿ ಪ್ರಕ್ರಿಯೆ ಮುಂದುವರಿಯುತ್ತಿರುತ್ತದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಯುಪಿಎ ಸರ್ಕಾರ ತನ್ನ ಆಡಳಿತದ ಕೊನೆಯ ನಾಲ್ಕು ವರ್ಷಗಳಲ್ಲಿ ವಾಣಿಜ್ಯ ಬ್ಯಾಂಕುಗಳ 1,45,226 ಕೋಟಿ ರೂ. ಸಾಲಗಳನ್ನು ರೈಟ್ ಆಫ್ ಮಾಡಿತ್ತು. ಇದನ್ನು ಮರೆಮಾಚಿ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ" ಎಂದು ಸಚಿವೆ ನಿರ್ಮಲಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವೆ, "ಯಾವುದೇ ಸಾಲಗಳನ್ನು ಮನ್ನಾ ಮಾಡಲಾಗಿಲ್ಲ. ಆದರೂ ಕಾಂಗ್ರೆಸ್ ಇಲ್ಲದ ವಿಷಯಗಳನ್ನು ವೈಭವೀಕರಿಸುತ್ತಿದೆ. 2009-10 ಮತ್ತು 2013-14 ರ ಮಧ್ಯೆ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ 1,45,226 ಕೋಟಿ ರೂ. ಸಾಲಗಳನ್ನು ರೈಟ್ ಆಫ್ ಮಾಡಲಾಗಿತ್ತು. ರೈಟ್ ಆಫ್ ಎಂದರೇನೆಂಬುದನ್ನು ರಾಹುಲ್ ಗಾಂಧಿಯವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಕೇಳಿ ಅರಿತುಕೊಂಡಿದ್ದರೆ ಚೆನ್ನಾಗಿತ್ತು." ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"2006-2008 ರ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದ ಕೆಟ್ಟ ಸಾಲಗಳನ್ನು ನೀಡಲಾಗಿತ್ತು ಎಂದು ಆಗಿನ ಆರ್ಬಿಐ ಗವರ್ನರ್ ರಘುರಾಮ ರಾಜನ್ ಹೇಳಿದ್ದನ್ನು ಮತ್ತೆ ನೆನಪಿಸಿಕೊಳ್ಳಬೇಕಿದೆ." ಎಂದು ಹೇಳಿರುವ ಸಚಿವೆ, ಭಾರತದ ಬ್ಯಾಂಕಿಂಗ್ ವಲಯದ ಗೊಂದಲಗಳಿಗೆ ಹಿಂದಿನ ಯುಪಿಎ ಸರಕಾರವೇ ಕಾರಣ ಎಂದು ಪರೋಕ್ಷವಾಗಿ ತಿವಿದಿದ್ದಾರೆ.