ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್‌ನ ಕೊನೆಯ ಕಂತನ್ನು ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಇಂದು ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್, ಜೀವ ಇದ್ದರೆ ಜೀವನ, ‘ಸ್ವಾಭಿಮಾನಿ ಭಾರತ ನಿರ್ಮಾಣವೇ ನಮ್ಮ ಗುರಿ' ಎಂದರು. 5ನೇ ಕಂತಿನಲ್ಲಿ ಉದ್ಯೋಗ ಖಾತ್ರಿ, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳು, ವ್ಯಾಪಾರ–ವಹಿವಾಟು, ಕಂಪನಿಗಳ ವಿರುದ್ಧ ವಿವಿಧ ಇಲಾಖೆಗಳು ಹೂಡಿರುವ ವ್ಯಾಜ್ಯಗಳು, ವ್ಯಾಪಾರಕ್ಕೆ ಸಹಕಾರ, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಸಂಪನ್ಮೂಲಗಳ ಬಗ್ಗೆ ಕೆಲವು ಘೋಣೆ ಮಾಡಿದರು.
ಆರೋಗ್ಯ ಕ್ಷೇತ್ರ:
ಆರೋಗ್ಯ ಕ್ಷೇತ್ರಕ್ಕೆ ಈಗಾಗಲೇ 15,000 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೆ ರಾಜ್ಯಗಳಿಗೆ 4,113 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅಗತ್ಯ ವಸ್ತುಗಳಿಗೆ 3750 ಕೋಟಿ ರೂ.ಮತ್ತು ಲ್ಯಾಬ್‌ಗಳಿಗೆ 550 ಕೋಟಿ ರೂ. ಇದರ ಜೊತೆಗೆ, ಕೇಂದ್ರ ಸರ್ಕಾರಿ ವೈದ್ಯರು, ನರ್ಸ್ಗಳು, ಅರೆವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಪೊರೇಟ್ ವಲಯಕ್ಕೆ ಪರಿಹಾರ:
ಕಾರ್ಪೊರೇಟ್ ವಲಯಕ್ಕೆ ಪರಿಹಾರ ನೀಡುವ ಕ್ರಮಗಳನ್ನು ಹಣಕಾಸು ಸಚಿವರು ತಿಳಿಸದ್ದಾರೆ. ಇವುಗಳಲ್ಲಿ ವಾರ್ಷಿಕ ಸಾಮಾನ್ಯ ಸಭೆಗಳನ್ನು (ಎಜಿಎಂ) ನಡೆಸಲು ಅನುಮತಿ, ಬ್ಯಾಲೆನ್ಸ್ ಶೀಟ್ ಕಳುಹಿಸಲು ಅನುಮತಿ, ಇಮೇಲ್ ಮೂಲಕ ಲೆಕ್ಕಪರಿಶೋಧಕರ ವರದಿ ಮತ್ತು ಅನುಸರಣೆ ಗಡುವನ್ನು ವಿಸ್ತರಿಸುವುದು ಸೇರಿವೆ.
ಇ-ಶಿಕ್ಷಣ:
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆನ್‌ಲೈನ್ ಶಿಕ್ಷಣ ಒತ್ತು ನೀಡಲಾಗಿದೆ. ಇಂಟರ್ನೆಟ್ ಸೌಲಭ್ಯ ಇಲ್ಲದವರನ್ನು ತಲುಪಲು ಶಾಲೆಗಳು ಬಳಸುವ ಡೈರೆಕ್ಟ್ ಟೆಲಿಕಾಸ್ಟ್ ಮೋಡ್‌ನಲ್ಲಿ 12 ಹೆಚ್ಚುವರಿ ಚಾನೆಲ್‌ಗಳು ಲಭ್ಯವಿವೆ. 'ದೀಕ್ಷಾ' ಮೂಲಕ ಶಿಕ್ಷಣ ಕ್ಷೇತ್ರದಲ್ಲಿ 'ಒಂದು ದೇಶ ಒಂದು ಡಿಜಿಟಲ್ ವೇದಿಕೆ' ಆರಂಭಿಸಲಾಗುವುದು. ಶೈಕ್ಷಣಿಕ ವಿಡಿಯೋ ಪ್ರಸಾರ ಮಾಡಲು ಸರ್ಕಾರವು ಏರ್ಟೆಲ್ ಮತ್ತು ಟಾಟಾ ಸ್ಕೈ DTH ಜೊತೆ ಒಪ್ಪಂದ ಮಾಡಿಕೊಂಡಿದೆ. ಅಸ್ತಿತ್ವದಲ್ಲಿರುವ 3 ಚಾನಲ್‌ಗಳ ಜೊತೆಗೆ, 12 ಹೊಸ ಸ್ವಯಂ ಪ್ರಭಾ ಡಿಟಿಎಚ್ ಚಾನಲ್‌ಗಳನ್ನು ಸೇರಿಸಬೇಕಾಗಿದೆ. ಪಿಎಂ ಇ-ವಿದ್ಯಾ ಕಾರ್ಯಕ್ರಮವನ್ನು ತಕ್ಷಣ ಪ್ರಾರಂಭಿಸಲಾಗುವುದು ಎಂದಿದ್ದಾರೆ.
ಮನ್ರೇಗಾ (MNREGA):
ಪಿಎಂ ಕಿಸಾನ್ ಸಮ್ಮನ್ ನಿಧಿ ಅಡಿಯಲ್ಲಿ 8.19 ಕೋಟಿ ರೈತರಿಗೆ 16,394 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ. ಬಡ ವಿಧವೆಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಒಟ್ಟು 3,000 ಕೋಟಿ ರೂಪಾಯಿಯನ್ನು ಎರಡು ಕಂತುಗಳಲ್ಲಿ ವರ್ಗಾಯಿಸಲಾಗಿದೆ.
20 ಕೋಟಿ ಜನ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 10,025 ಕೋಟಿ ರೂ., 2.2 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 3,950 ಕೋಟಿ ರೂ., 6.81 ಕೋಟಿ ಜನರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ಗನ್ನು ನೀಡಲಾಗಿದೆ ಎಂದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸರ್ಕಾರ ಈಗ ಹೆಚ್ಚುವರಿ 40,000 ಕೋಟಿ ರೂ ಮೀಸಲಿಡಲಾಗಿದೆ. ಬಜೆಟ್ ಅಂದಾಜಿನಲ್ಲಿ 60,000 ಕೋಟಿ ರೂ. ಇಂದಿನ ಪ್ರಕಟಣೆ ಸೇರಿ MNREGA ಯೋಜನೆಗೆ ಒಟ್ಟು 1 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ಸುಧಾರಣೆಗಳು:
ಪ್ರಮುಖ ನೀತಿ ಬದಲಾವಣೆಯಲ್ಲಿ, ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ತೆರೆಯಲಾಗುತ್ತದೆ ಎಂದಿದ್ದಾರೆ. ಸಮಗ್ರ ಸಾರ್ವಜನಿಕ ವಲಯದ ಉದ್ಯಮ ನೀತಿಯನ್ನು ಸರ್ಕಾರ ಅನುಮತಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು. ಅತಿ ಮುಖ್ಯ ಮತ್ತು ಸೂಕ್ಷ್ಮ ಕ್ಷೇತ್ರಗಳಲ್ಲಿ ಈ ಹಿಂದಿನಂತೆಯೇ ಸರ್ಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಅಂಥ ಕ್ಷೇತ್ರಗಳನ್ನು ಶೀಘ್ರ ಘೋಷಿಸಲಾಗುವುದು ಎಂದಿದ್ದಾರೆ.
ರಾಜ್ಯಗಳು ಆದಾಯದಲ್ಲಿ ತೀವ್ರ ಕುಸಿತ ಕಂಡಿವೆ, ನಾವು ನಿರಂತರವಾಗಿ ರಾಜ್ಯಗಳಿಗೆ ಸಹಾಯವನ್ನು ನೀಡಿದ್ದೇವೆ. ಕೇಂದ್ರದ ಸಂಪನ್ಮೂಲಗಳ ಒತ್ತಡದ ಹೊರತಾಗಿಯೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜ್ಯಗಳಿಗೆ ಆದಾಯ ಕೊರತೆ ಅನುದಾನವನ್ನು 12,390 ಕೋಟಿ ರೂ. ಸಮಯಕ್ಕೆ ಸರಿಯಾಗಿ ನೀಡಿದ್ದೇವೆ. ಏಪ್ರಿಲ್‌ನಲ್ಲಿ 46,038 ರೂ.ಗಳ ತೆರಿಗೆ ಹಂಚಿಕೆ ಪೂರ್ಣಗೊಂಡಿದೆ ಎಂದು ವಿವರಿಸಿದ್ದಾರೆ.
2020-21ರ ಅವಧಿಯಲ್ಲಿ ರಾಜ್ಯಗಳ ಸಾಲ ಮಿತಿಯನ್ನು ಒಟ್ಟು ರಾಜ್ಯ ದೇಶಿಯ ಉತ್ಪನ್ನದ (ಜಿಎಸ್‌ಡಿಪಿ) ಶೇ 3 ರಿಂದ 5ಕ್ಕೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ. ಈ ಮೂಲಕ 4.28 ಲಕ್ಷ ಕೋಟಿ ಹಣವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲು ಅವಕಾಶ ನೀಡಿದಂತೆ ಆಗಿದೆ. ರಾಜ್ಯಗಳು ಇಲ್ಲಿಯವರೆಗೆ ಕೇವಲ 14 ರಷ್ಟು ಸಾಲ ಪಡೆದುಕೊಂಡಿವೆ. ಶೇಕಡಾ 86 ರಷ್ಟು ಮಿತಿ ಬಳಕೆಯಾಗದೆ ಉಳಿದಿದೆ ಎಂದಿದ್ದಾರೆ
ಹೊಸ ಆರ್ಥಿಕ ಪ್ಯಾಕೇಜ್ ಕುರಿತು ಪ್ರಧಾನಿ ಮೋದಿ ಮಾತನಾಡುವ ಮೊದಲೇ 1 ಲಕ್ಷದ 92 ಸಾವಿರದ 800 ಕೋಟಿ ರೂಪಾಯಿ ನೀಡಲಾಗಿತ್ತು. ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ 5,94,550 ಕೋಟಿ ರೂಪಾಯಿ ಮೊತ್ತವನ್ನು ಮೊದಲ ಹಂತದ ಪ್ರಕಟಣೆಗಳ ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ 3,10,000 ಕೋಟಿ ರೂಪಾಯಿ. ಮೂರನೇ ಹಂತದಲ್ಲಿ 1,50,000 ಕೋಟಿ ರೂಪಾಯಿ, ನಾಲ್ಕನೇ ಮತ್ತು ಐದನೇ ಹಂತದಲ್ಲಿ 48,100 ಕೋಟಿ ರೂ. ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತ ಅಡಿಯಲ್ಲಿ ಒಟ್ಟಾರೆ 20,97,053 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.