ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ವರ್ಷ ಜುಲೈ 26ರಂದು ಪ್ರಮಾಣವಚ ಸ್ವೀಕರಿಸಿದ ಬಳಿಲಕೆ ಇದೇ ಮೊದಲನೇ ಬಾರಿಗೆ ಆಯವ್ಯಯ ಮಂಡಿಸುತ್ತಿದ್ದಾರೆ.
ಈ ಹಿಂದೆ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗ ಬಿಎಸ್ವೈ ಹಣಕಾಸು ಖಾತೆ ಹೊಂದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಆರು ಬಾರಿ ಆಯವ್ಯಯ ಮಂಡಿಸಿರುವ ಅವರು 7ನೇ ಬಜೆಟ್ ಅನ್ನು ಇಂದು ಬೆಳಗ್ಗೆ 11ಕ್ಕೆ ಮಂಡಿಸಲಿದ್ದಾರೆ.
ಆರ್ಥಿಕ ಹಿಂಜರಿತದಿಂದ ಉಂಟಾಗಿರುವ ಆದಾಯ ಕೊರತೆ ಮಧ್ಯೆಯೇ ಸಂಪನ್ಮೂಲ ಕ್ರೋಢೀಕರಣದ ಸವಾಲು ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ 11ಕ್ಕೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ಕೇಂದ್ರ ಸರ್ಕಾರವು ಜಿಎಸ್ಟಿ ಸಂಗ್ರಹದ ಅಭಾವದಿಂದ ರಾಜ್ಯಗಳ ತೆರಿಗೆ ಪಾಲನ್ನೂ ಕಡಿಮೆ ಮಾಡಿದೆ. ಇದರಿಂದ ರಾಜ್ಯಕ್ಕೆ ಬರಬೇಕಿದ್ದ ಆದಾಯ ಪಾಲು ಕುಸಿತವಾಗಿದೆ. ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಸಾರಿಗೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳಲ್ಲೂ ಆದಾಯ ಸಂಗ್ರಹ ಇಳಿಕೆಯಾಗಿದೆ. ಸಂಪನ್ಮೂಲ ಕ್ರೋಢೀಕರಣದ ಸವಾಲು ಎದುರಿಸಲಿರುವ ಬಿಎಸ್ವೈ ಅವರು ಅನಿವಾರ್ಯವಾಗಿ ಅಬಕಾರಿ ಮತ್ತು ಸಾರಿಗೆ ಕ್ಷೇತ್ರಗಳ ಮುಖೇನ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಬೇಕಿದೆ.
2011ರಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿ, ದೇಶದಲ್ಲಿ ಕೃಷಿ ಬಜೆಟ್ ಮಂಡಿಸಿದ ಪ್ರಥಮ ಸಿಎಂ ಎಂಬ ಹೆಗ್ಗಳಿಕೆಗೆ ಬಿಎಸ್ವೈ ಪಾತ್ರರಾಗಿದ್ದರು. ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಬಾಂಡ್, ಸಂಧ್ಯಾ ಸುರಕ್ಷಾ, ಮಠಗಳಿಗೆ ಅನುದಾನದಂತಹ ಜನಪ್ರಿಯ ಯೋಜನೆಗಳನ್ನು ಘೋಷಿಸಿ ಮೆಚ್ಚಿಗೆ ಗಳಿಸಿದ್ದರು. ಸಂಪತ್ತಿನ ಕೊರತೆಯ ನಡುವೆ ಸಿದ್ದರಾಮಯ್ಯ ಹಾಗೂ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಕೆಲ ಯೊಜನೆಗಳಿಗೆ ಅನುದಾನವನ್ನು ಕಡಿತಗೊಳಿಸಿದೆ ವಿತ್ತೀಯ ಶಿಸ್ತು ಪ್ರದರ್ಶಿಸಬೇಕಿದೆ.
ಕಳೆದ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಗಾತ್ರ ₹ 2,34,153 ಕೋಟಿಯಷ್ಟಿತ್ತು. ಬಿಎಸ್ವೈ ಬಜೆಟ್ ಗಾತ್ರ ₹ 2.50 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ. ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕ್ರೀಡೆ ಹಾಗೂ ಮೂಲಸೌಕರ್ಯ ವಲಯಗಳಿಗೆ ಅಪಾರ ಸಂಪತ್ತು ಬೇಕು. ಅದನ್ನು ಸರಿದೂಗಿಸುವ ಸವಾಲು ಸಿಎಂ ಎದುರಿದೆ. ಆರ್ಥಿಕ ಸಂಕಟ, ಮಂದಗತಿಯ ಬೆಳವಣಿಗೆ, ಪ್ರವಾಹ, ಸಾಲದ ಪ್ರಮಾಣಗಳ ಏರಿಕೆಯ ಮಧ್ಯೆಯೂ ಬಿಎಸ್ವೈ ಆಯವ್ಯಯದ ಮೇಲೆ ಅಪಾರ ನಿರೀಕ್ಷೆಗಳನ್ನು ಇರಿಸಿಕೊಳ್ಳಲಾಗಿದೆ.