ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯ ಮೂರನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸ್ತಿದೆ. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ವಿತ್ತ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರು ತಮ್ಮ 3ನೇ ಮುಂಗಡಪತ್ರ ಸೋಮವಾರ ಮಂಡಿಸಲಿದ್ದಾರೆ.
ಕೊರೊನಾದಿಂದ ಆರ್ಥಿಕ ಮುಗ್ಗಟ್ಟು, ಜಿಎಸ್ಟಿ ಆದಾಯ ಕುಸಿತ, ಉತ್ಪಾದನೆ ಕ್ಷೀಣ, ಉಪಭೋಗದ ಬೇಡಿಕೆ ಕ್ಷೀಣ, ನಿರುದ್ಯೋಗ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಕಚ್ಛಾತೈಲಗಳ ಬೆಲೆ ಏರಿಕೆ ಸೇರಿ ಅನೇಕ ಸಮಸ್ಯೆಗಳ ನಡುವೆ ಸಿಲುಕಿರುವ ದೇಶದ ಆರ್ಥಿಕತೆಯ ದೃಷ್ಟಿಕೊನದಿಂದ ಫೆ.1ರಂದು ಮಂಡನೆಯಾಗುವ 2021-22ರ ಬಜೆಟ್ ಮಹತ್ವದಾಗಿದೆ. ಈ ವೇಳೆ ಕರ್ನಾಟಕ ಏನೆಲ್ಲ ನಿರೀಕ್ಷಿಸುತ್ತಿದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
ಪ್ರಸಕ್ತ ವರ್ಷ ರಾಜ್ಯದ ಹಂಚಿಕೆಯನ್ನು ಕೆಳ ಮಟ್ಟಕ್ಕೆ ಪರಿಷ್ಕರಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸಿದ ಕರ್ನಾಟಕ, ಕೇಂದ್ರ ಹಣಕಾಸು ಪ್ರಾಯೋಜಿತ ಯೋಜನೆಗಳಿಗೆ (ಸಿಎಸ್ಎಸ್) ಅನುದಾನವನ್ನು ಗಣನೀಯವಾಗಿ ಹೆಚ್ಚಿಸುವಂತೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.
15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಘೋಷಿಸಿದ 5,495 ಕೋಟಿ ರೂ. ವಿಶೇಷ ಅನುದಾನ ಸೇರಿದಂತೆ ಬಾಕಿ ಇರುವ ಎಲ್ಲಾ ಬಾಕಿಗಳನ್ನು ತೆರವುಗೊಳಿಸಲು ಕೇಂದ್ರಕ್ಕೆ ತಾಕೀತು ಮಾಡಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚುವರಿ ಅನುದಾನು ಕೊಡುವಂತೆ ಕೋರಿದೆ.
ಹೊಸ ಸಿಎಸ್ಎಸ್ ಯೋಜನೆ ಪರಿಚಯಿಸುವಾಗ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಪರಿಗಣಿಸಬೇಕು. ಇಲ್ಲದಿದ್ದರೇ ರಾಜ್ಯ ಹಣಕಾಸಿನ ಮೇಲೆ ಹೊರೆ ಉಂಟಾಗಲಿದೆ. ಬಜೆಟ್‌ನಲ್ಲಿ ರೂಪಿಸಲಾದ ಯೋಜನಾ ವಿನಿಯೋಗದ ಪ್ರಕಾರ ಕೇಂದ್ರ ಸರ್ಕಾರವು ಸಿಎಸ್ಎಸ್ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು. ಯೋಜನೆ ವಿನಿಯೋಗಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಹೊರೆ ಉಂಟಾಗುತ್ತದೆ. ಹೀಗಾಗಿ, ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇರಿಸಿದೆ.