ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ಗೆಲುವು ಸಾಧಿಸಿದ್ದು ಭಾರತದ ಇಂಧನ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಅಧ್ಯಕ್ಷರು ಇರಾನ್ ಮೇಲೆ ವಿಧಿಸಿದ್ದ ವಾಣಿಜ್ಯಾತ್ಮಕ ನಿರ್ಬಂಧಗಳ ಸಡಿಲಿಕೆ ಮಾಡಬಹುದು ಎಂದು ಇಂಧನ ತಜ್ಞರು 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಸ್ವಲ್ಪ ಸಮಯ ತೆಗೆದು ಈ ನಿರ್ಧಾರಕ್ಕೆ ಬರಬಹುದು. ಇದರ ಜತೆಗೆ ಇರಾನ್‌ನೊಂದಿಗಿನ ಪರಮಾಣು ಒಪ್ಪಂದ ಪುನರುಜ್ಜೀವನಗೊಳಿಸುವ ಸಾಧ್ಯತೆಯಿದೆ ಎಂದು ಪೆಟ್ರೋಲಿಯಂ ಮತ್ತು ಇಂಧನ ಅಧ್ಯಯನ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಮುಖ್ಯಸ್ಥ ಡಾ. ಹಿರನ್ಮಾಯ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮತ್ತು ದೇಶೀಯ ಇಂಧನ ಮಾರುಕಟ್ಟೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಡಾ. ರಾಯ್, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭೌಗೋಳಿಕ ರಾಜಕೀಯ ಸಮೀಕರಣಗಳು ಪ್ರಮುಖ ಪಾತ್ರವಹಿಸುತ್ತವೆ. ಹಳೆಯ ಒಪ್ಪಂದದ ಮರುಜೀವಂತಿಕೆಯು ನೆರೆಹೊರೆಯ ರಾಷ್ಟ್ರಗಳ ಮೇಲೆ ಸಕರಾತ್ಮಕ ಪ್ರಭಾವ ಬೀರುವಂತಹದ್ದು. ಹೀಗಾಗಿ, ಅಗ್ಗದ ದರದಲ್ಲಿ ತೈಲ ಆಮದು ಪಡೆಯಲು ಭಾರತಕ್ಕೆ ನೆರವಾಗುತ್ತೆ ಎಂದು ಹೇಳಿದ್ದಾರೆ.