ನವದೆಹಲಿ:ಮತದಾನದ ಹೊಸ್ತಿಲಲ್ಲಿ ಐಟಿ ದಾಳಿಗಳನ್ನು ಖಂಡಿಸಿ ಬಿಜೆಪಿ ವಿರುದ್ಧ ಹರಿಹಾಯುತ್ತಿರುವ ಪ್ರತಿ ಪಕ್ಷಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, 'ಆದಾಯ ತೆರಿಗೆ ಇಲಾಖೆ ವಸ್ತು ನಿಷ್ಠವಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ ಹಾಗೂ ಸ್ಪಷ್ಟವಾದ ಸಾಕ್ಷ್ಯಾಧಾರಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ' ಎಂದು ಐಟಿ ವೈಖರಿಯನ್ನು ಸಮರ್ಥಿಸಿಕೊಂಡರು.
ಇತ್ತೀಚೆಗೆ ಮಧ್ಯಪ್ರದೇಶದ ಸಿಎಂ ಕಮಲ್ನಾಥ್ ಆಪ್ತರು, ಕರ್ನಾಟಕ ಸಿಎಂ ಎಚ್ಡಿ ಕುಮಾರಸ್ವಾಮಿ ಆಪ್ತರು ಹಾಗೂ ತಮಿಳುನಾಡಿನ ಡಿಎಂಕೆ ನಾಯಕರುಗಳ ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಹವಾಲ ಹಣ ಬಳಕೆ ಹಾಗೂ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದರೂ ರಾಜಕೀಯ ಪಕ್ಷಗಳು, ಕೇಂದ್ರ ಉದ್ದೇಶ ಪೂರ್ವಕವಾಗಿ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಪ್ರಚೋದನೆ ನೀಡುತ್ತಿದೆ ಎಂದು ದೂರಿದರು.
ಹಣಕಾಸು ಮತ್ತು ಕಂದಾಯ ಸಚಿವಾಲಯಗಳ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಚುನಾವಣೆ ವೇಳೆ 'ತಟಸ್ಥ ಧೋರಣೆ' ಹಾಗೂ 'ತಾರತಮ್ಯವಲ್ಲದ' ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಚುನಾವಣಾ ಆಯೋಗವು ಸಲಹೆ ನೀಡಿ ಆದಾಯ ತೆರಿಗೆ ಇಲಾಖೆ ಕಾರ್ಯದರ್ಶಿ ಎ.ಬಿ. ಪಾಂಡೆ ಅವರಿಗೆ ಪತ್ರ ಬರೆದಿತ್ತು.