ನವದೆಹಲಿ: ಒಂದು ವಿಚಿತ್ರ ಘಟನೆಯಲ್ಲಿ ಆದಾಯ ತೆರಿಗೆ ಇಲಾಖೆಯು ಒಂದೇ ಖಾಯಂ ಖಾತೆ ಸಂಖ್ಯೆಯನ್ನು (ಪ್ಯಾನ್) ಇಬ್ಬರು ವ್ಯಕ್ತಿಗಳಿಗೆ ನೀಡಿ ಸ್ವಯಂಕೃತ ಎಡವಟ್ಟನ್ನು ಮೈಮೇಲೆ ಎಳೆದುಕೊಂಡಿದೆ.
ಒಂದೇ ಸಂಖ್ಯೆಗಳನ್ನು ಇಬ್ಬರಿಗೂ ನೀಡಿದ್ದರ ಪರಿಣಾಮವಾಗಿ ಐಟಿ ರಿಟರ್ನ್ ಸಲ್ಲಿಸುವಾಗ ತೊಂದರೆ ಉಂಟಾಗಿದೆ. ಆ ಮೂಲಕ ತೆರಿಗೆ ಇಲಾಖೆಯೇ ಇಕ್ಕಟ್ಟಿಗೆ ಸಿಲುಕಿದೆ. ಜೈಪುರದ ನಿವಾಸಿ ರಾಜೇಶ್ ಎಂಬುವರಿಗೆ ಪ್ಯಾನ್- ಎಒಟಿಪಿಆರ್ 0314ಪಿ (PAN -AOTPR0314P) ಹಂಚಿಕೆ ಮಾಡಲಾಗಿತ್ತು.
ತಮಗೆ ನೀಡಲಾದ ಪ್ಯಾನ್ ಸಂಖ್ಯೆಯೊಂದಿಗೆ 2017-18ರ ಹಣಕಾಸು ವರ್ಷದ ಐಟಿ ರಿಟರ್ನ್ ಸಲ್ಲಿಸಿದ್ದರು. ಈ ವರ್ಷಕ್ಕೆ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗದೇ ಯಾರಾದರೂ ಅದೇ ಪ್ಯಾನ್ ಸಂಖ್ಯೆ ಹೊಂದಿದ್ದಾರೆಂದು ಅವರು ತಿಳಿದುಕೊಂಡರು."ನಾನು ಆದಾಯ ತೆರಿಗೆ ಇಲಾಖೆಗೆ ಅನೇಕ ಬಾರಿ ದೂರು ಸಲ್ಲಿಸಿದ್ದೇನೆ. ಆದರೆ, ಈವರೆಗೂ ಇಲಾಖೆ ವತಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಜೇಶ್ ಹೇಳಿದ್ದಾರೆ.
ಆದಾಯ ತೆರಿಗೆ ಸಲ್ಲಿಸುವ ಕಾರ್ಯವಿಧಾನದ ಪ್ರಕಾರ, ಈ ಹಿಂದಿನ ಹಣಕಾಸು ವರ್ಷದಲ್ಲಿ ಸಲ್ಲಿಸಲು ಬಳಸಿದ ಅದೇ ಪ್ಯಾನ್‌ನೊಂದಿಗೆ ರಿಟರ್ನ್ ಸಲ್ಲಿಸಬೇಕು. ಈ ನಡುವೆ ಹಣಕಾಸು ತಜ್ಞರೊಬ್ಬರು, ಐಟಿ ಇಲಾಖೆಯು ಒಂದೇ ಪ್ಯಾನ್ ಸಂಖ್ಯೆ ನೀಡಿರುವುದು ಅಸಾಧ್ಯ. ಬೇರೆಯಾರಾದರೂ ಕಂಪ್ಯೂಟರ್ ಮುಖೇನ ಸಂಖ್ಯೆ ರಚಿಸಿದಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದಿದ್ದಾರೆ.
ಒಂದು ವೇಳೆ ಇಂತಹ ಘಟನೆ ಸಂಭವಿಸಿದ್ದರೇ ಇ-ಮೇಲ್ ಮುಖಾಂತರ ದೂರು ಸಲ್ಲಿಸಬೇಕೆ ಹೊರೆತು ಕರೆ ಮುಖೇನ ಅಲ್ಲ. ದೂರುದಾರ ಪ್ಯಾನ್ ಸಂಖ್ಯೆ ಸ್ನ್ಯಾಪ್ ಪ್ರತಿ ಜೋಡಿಸಿ ಐಟಿಗೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.