ನವದೆಹಲಿ:ದೇಶಿಯ ಪ್ರಯಾಣಿಕ ವಾಹನಗಳ (ಪಿವಿ) ಮಾರಾಟದಲ್ಲಿ ಸತತ 9ನೇ ತಿಂಗಳು ಸಹ ಇಳಿಮುಖ ದಾಖಲೆ ಮುಂದುವರೆದಿದ್ದು, ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಒದಗಿಸಿರುವ ಆಟೋ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಉದ್ಯೋಗ ಕಡಿತದ ಭೀತಿಯಲ್ಲಿ ಲಕ್ಷಾಂತರ ಜನ ದಿನ ದೂಡುತ್ತಿದ್ದಾರೆ.
ಜುಲೈ ತಿಂಗಳ ಪಿವಿ ವಾಹನಗಳ ಮಾರಾಟದಲ್ಲಿ ಶೇ 30.9ರಷ್ಟು ಇಳಿಕೆ ಆಗಿದ್ದು, ವಾಣಿಜ್ಯ ಮಾರಾಟಗಳ ಪ್ರಮಾಣ ಸಹ ಶೇ 25.7ರಷ್ಟು ಕ್ಷೀಣಿಸಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ತಿಳಿಸಿದೆ.
ಜುಲೈನಲ್ಲಿ 2,00,790 ಪ್ಯಾಸೆಂಜರ್ ವಾಹನಗಳು ಮಾರಾಟ ಕಂಡಿದ್ದರೇ ಕಮರ್ಸಿಯಲ್ ವಾಹನಗಳ ಮಾರಾಟ 56,866 ಯೂನಿಟ್ಗಳಾಗಿವೆ. ಮೋಟಾರ್ಸೈಕಲ್ ಮತ್ತು ಸ್ಕೂಟರ್ ದರದಲ್ಲಿ ಶೇ 16.8ರಷ್ಟು ಹಾಗೂ ಶೇ. 36ರಷ್ಟು ಇಳಿಕೆಯಾಗಿ ಕ್ರಮವಾಗಿ 1.51 ಮಿಲಿಯನ್ ಮತ್ತು 1,22,956 ಉತ್ಪನ್ನಗಳು ಮಾರಾಟ ಕಂಡಿವೆ ಎಂದು ತಿಳಿಸಿದೆ.
ದೇಶಿಯ ಪ್ರಯಾಣಿಕರ ವಾಹನ ಉತ್ಪಾದನೆ ಸಹ ಶೇ.17ರಷ್ಟು ಕಡಿಮೆಯಾಗಿದೆ. ವಾಹನೋದ್ಯಮ ಮತ್ತೆ ಚೇತರಿಸಿಕೊಳ್ಳಬೇಕಾದರೆ ಕೇಂದ್ರ ತುರ್ತಾಗಿ ಅಗತ್ಯ ಪ್ಯಾಕೇಜ್ ಘೋಷಿಸಬೇಕು. ಆಟೋ ವಲಯದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟುಗಳನ್ನು ತಡೆಯಬೇಕು ಎಂದು ಸಿಯಾಮ್ ಮಹಾನಿರ್ದೇಶಕ ವಿಷ್ಣು ಮಾಥುರ್ ಮನವಿ ಮಾಡಿದ್ದಾರೆ.