ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದ ಚೀನಾಗೆ ಕಡಿವಾಣ ಬಿದ್ದಿದೆ. 'ಭಾರತ ಡಬ್ಲ್ಯುಟಿಒನ ಎಫ್‌ಡಿಐ ಮಾನದಂಡದ ಮುಕ್ತ ವ್ಯಾಪಾರದ ತತ್ವವನ್ನು ಉಲ್ಲಂಘಿಸುತ್ತಿದೆ' ಎಂದು ಚೀನೀ ರಾಯಭಾರ ಕಚೇರಿ ವಕ್ತಾರ ಬೊಬ್ಬೆ ಹಾಕಿದ್ದಾರೆ.
ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತದ ಹೊಸ ಮಾನದಂಡಗಳು ಡಬ್ಲ್ಯುಟಿಒನ ತಾರತಮ್ಯ ರಹಿತ ತತ್ವವನ್ನು ಉಲ್ಲಂಘಿಸಿದಂತಿದೆ. ಇದು ಮುಕ್ತ ವ್ಯಾಪಾರದ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.
ಭಾರತದ ಜೊತೆಗೆ ಭೂಗಡಿ ಹೊಂದಿರುವ ರಾಷ್ಟ್ರಗಳು ಇಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಭಾರತ ಸರ್ಕಾರದ ಅನುಮತಿಪಡೆಯಬೇಕಾಗುತ್ತದೆ. ಕಳೆದ ತಿಂಗಳು ಚೀನಾ ಎಚ್ಡಿಎಫ್ಸಿ ಬ್ಯಾಂಕ್ನ ಷೇರುಗಳನ್ನು ಖರೀದಿಸಿದ ಬೆನ್ನಲ್ಲೇ ಭಾರತ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳಲ್ಲಿ ಬದಲಾವಣೆ ಮಾಡಿತ್ತು.
ನಿರ್ದಿಷ್ಟ ದೇಶಗಳ ಹೂಡಿಕೆದಾರರಿಗೆ ಭಾರತ ನಿಗದಿಪಡಿಸಿದ ಹೆಚ್ಚುವರಿ ಅಡೆ ತಡೆಗಳು ವಿಶ್ವ ವಾಣಿಜ್ಯ ಸಂಸ್ಥೆಯ ತಾರತಮ್ಯ ಇಲ್ಲದ ತತ್ವವನ್ನು ಉಲ್ಲಂಘಿಸುತ್ತದೆ. ಉದಾರೀಕರಣ ಮತ್ತು ವ್ಯಾಪಾರ ಹೂಡಿಕೆಯ ಅನುಕೂಲತೆಗೆ ವಿರುದ್ಧವಾದ ನಡೆ ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ ರೋಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.