ನವದೆಹಲಿ: ಭಾರತದ ಜಿಡಿಪಿ (ಒಟ್ಟು ದೇಶೀಯ ಉತ್ಪಾದನೆ) ಬೆಳವಣಿಗೆ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಗ್ಗಿಸಿದ ಬೆನ್ನಲ್ಲೇ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಕೂಡ ಇಳಿಸಿದೆ.
2019-20ನೇ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವು ಶೇ 5.1ರಷ್ಟು ಇರಲಿದೆ. ಸಾಲದ ಲಭ್ಯತೆ ಕಡಿಮೆ, ಉದ್ಯೋಗ ಸೃಷ್ಟಿ ಅವಕಾಶಗಳ ಕ್ಷೀಣಿಸುವಿಕೆ ಹಾಗೂ ಕೃಷಿ ಉತ್ಪಾದನೆ ಕಡಿಮೆಯಾಗಿ ಗ್ರಾಮೀಣ ಭಾಗದ ಜನರು ಸಂಕಟ ಅನುಭವಿಸುತ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಆರ್ಥಿಕ ವೃದ್ಧಿದರ ಈ ಮೊದಲಿನ ಅಂದಾಜು ಶೇ 6.5ರ ಬದಲಿಗೆ ಶೇ 5.1ಕ್ಕೆ ಏಷ್ಯಾ ಬ್ಯಾಂಕ್ ತಗ್ಗಿಸಿದೆ.
ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಬಳಕೆಯ ಪ್ರಮಾಣ ಶೇ 41ರಷ್ಟು ಹಾಗೂ ಬಂಡವಾಳ ಹೂಡಿಕೆ ಶೇ 2.5ರಷ್ಟಿ ಇಳಿಕೆಯಾಗಿದೆ. ತತ್ಪರಿಣಾಮವಾಗಿ ವೃದ್ಧಿಯ ದರವು ಶೇ 4.8ಕ್ಕೆ ಇಳಿಯಲಿದೆ. ಸರ್ಕಾರ ತೆಗೆದುಕೊಂಡ ಸುಧಾರಣಾ ಕ್ರಮಗಳು 2020-21ನೇ ಹಣಕಾಸು ವರ್ಷದಲ್ಲಿ ಫಲ ಕೊಡಲಿದ್ದು, ಆರ್ಥಿಕತೆಯು ಸ್ಥಿರತೆ ಕಂಡುಕೊಳ್ಳಲಿದೆ. ಹೀಗಾಗಿ, ಬೆಳವಣಿಗೆ ದರವು ಶೇ 6.5ಕ್ಕೆ ಮರಳುವ ನಿರೀಕ್ಷೆ ಇದೆ ಎಂಬ ಆಶಾವಾದ ವ್ಯಕ್ತಪಡಿಸಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್ಬಿಎಫ್ಎಸ್) 2018ರ ಅವಧಿಯಲ್ಲಿ ಉದ್ಭವಿಸಿದ್ದ ನಗದು ಬಿಕ್ಕಟ್ಟಿನಿಂದ ಹಣಕಾಸು ವಲಯದಲ್ಲಿ ಸಾಲ ಮರುಪಾವತಿ ಸಮಸ್ಯೆ ಉಂಟಾಗಿದೆ. ನೂತನ ಸಾಲ ನೀಡಿಕೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಉದ್ಯೋಗ ಸೃಷ್ಟಿ ಸಹ ಮಂದಗತಿಯಲ್ಲಿ ಸಾಗಿತ್ತು ಎಂದು 2019ರ ಸಾಲಿನ ಏಷ್ಯಾದ ಅಭಿವೃದ್ಧಿ ಮುನ್ನೋಟ ಪರಿಷ್ಕೃತ ವರದಿಯಲ್ಲಿ ಹೇಳಿದೆ.