ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು ತ್ವರಿತವಾಗಿ ಚೇತರಿಸಿಕೊಳ್ಳಲಿದೆ. ವರ್ಷದಿಂದ ವರ್ಷಕ್ಕೆ ಭಾರತದ Q2FY22 ಜಿಡಿಪಿ( ಒಟ್ಟು ದೇಶೀಯ ಉತ್ಪನ್ನ) ಚೇತರಿಕೆ ಕಾಣುತ್ತಿದ್ದು, ಈ ಭಾರಿ ಅದು ಶೇಕಡಾ 8.5 ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಅಕ್ಯೂಟ್ ರೇಟಿಂಗ್ಸ್ ಏಜೆನ್ಸಿ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ರೇಟಿಂಗ್ ಏಜೆನ್ಸಿ ನೀಡಿದ ಮಾಹಿತಿ ಪ್ರಕಾರ, ಕೋವಿಡ್ ಲಾಕ್‌ಡೌನ್ ಹಾಗೂ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಿದ ನಂತರ ಗ್ರಾಹಕರ ಬೇಡಿಕೆ, ಖರ್ಚು ಮತ್ತು ಉತ್ಪಾದನಾ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಗ್ರಾಹಕ ಸರಕುಗಳ ಬೆಲೆಗಳೂ ಗಗನಮುಖಿಯಾಗಿ ಏರತೊಡಗಿವೆ. ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ್ದರಿಂದ ಜಿಡಿಪಿ ಬೆಳೆಯಲು ಸಹಕಾರಿಯಾಗುತ್ತಿದೆ ಎಂದು ಅಕ್ಯೂಟ್ ರೇಟಿಂಗ್ಸ್ ತಿಳಿಸಿದೆ.