ನವದೆಹಲಿ:ಪ್ರಸಕ್ತ ಹಣಕಾಸು ವರ್ಷದ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಭಾರತವು ತೀಕ್ಷ್ಣವಾದ ವಿ-ಆಕಾರದ ಆರ್ಥಿಕ ಚೇತರಿಕೆ ಕಾಣಲಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್ ಕೆ ಸಿಂಗ್ ಹೇಳಿದ್ದಾರೆ.
ಕೊರೊನಾ ವೈರಸ್ ಲಾಕ್‌ಡೌನ್ ಗಂಭೀರ ಬೇಡಿಕೆ ಮತ್ತು ಪೂರೈಕೆ ಮೇಲೆ ಅಗಾದ ಪರಿಣಾಮ ಬೀರಿದ್ದರಿಂದ 2021ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಿ ಇರಲಿದೆ ಎಂದು ಅಂದಾಜಿಸಿದರು.
ಮುಂದಿನ ಆರ್ಥಿಕ ವರ್ಷದಲ್ಲಿಯೂ ಜಾಗತಿಕ ಆರ್ಥಿಕತೆಯ ಖಿನ್ನತೆಯು ವಿತ್ತೀಯ ಬೆಳವಣಿಗೆಯ ಭವಿಷ್ಯದ ಮೇಲೆ ತನ್ನ ನೆರಳು ಬೀರುತ್ತಲೇ ಇರುತ್ತದೆ. 2022-23ರ ಆರ್ಥಿಕ ವಿಸ್ತರಣೆಯು ಈಗಿನ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಉಪಕ್ರಮಗಳು ಸುಸ್ಥಿರವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತವೆ. ಈ ಸಾಂಕ್ರಾಮಿಕ ರೋಗವು ಅಗಾಧವಾದ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಿದ್ದು, ಲಾಕ್‌ಡೌನ್ ಬೇಡಿಕೆ ಮತ್ತು ಪೂರೈಕೆಯನ್ನೇ ಸ್ಥಳಾಂತರಿಸಿದೆ ಎಂದು ಎಐಎಂಎ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಮೊದಲ ತ್ರೈಮಾಸಿಕ ಮತ್ತು ಎರಡನೇ ತ್ರೈಮಾಸಿಕದಲ್ಲಿ ಕನಿಷ್ಠ ಉತ್ತಮ ಬೆಳವಣಿಗೆ ಸಹ ಕಾಣುವುದಿಲ್ಲ. ಪ್ರಸಕ್ತ ಹಣಕಾಸು ವರ್ಷದ 3ನೇ ಮತ್ತು 4ನೇ ತ್ರೈಮಾಸಿಕದಲ್ಲಿ ತೀಕ್ಷ್ಣವಾದ ವಿ-ಆಕಾರದ ಆರ್ಥಿಕ ಚೇತರಿಕೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಮೂಲಭೂತವಾಗಿ ಏನಾದರೂ ಸಂಭವಿಸಬಹುದು. ಒಂದು ಕಾರಣವಂತು ಸತ್ಯ, ಮುಂದೆ ಅದೇನೇ ಇದ್ದರೂ ಒಟ್ಟಾರೆಯಾಗಿ ಹಣಕಾಸಿನ ವರ್ಷವು ನಕಾರಾತ್ಮಕ ಪಥದಲ್ಲಿ ಕೊನೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಜಾಗತಿಕ ಮತ್ತು ದೇಶಿಯ ಏಜೆನ್ಸಿಗಳು ಪ್ರಸಕ್ತ ವರ್ಷದ ಬೆಳವಣಿಗೆಯ ಶೇ(-) 3.2 ರಿಂದ ಶೇ (-) 9.5ರವರೆಗಿನ ತೀವ್ರ ಸಂಕೋಚನವನ್ನು ಅಂದಾಜಿಸಿವೆ.
ಬ್ಯಾಂಕ್ ಮರು ಬಂಡವಾಳೀಕರಣಕ್ಕೆ ಸಂಬಂಧ, ಹೆಚ್ಚು ಮಹತ್ವದ ಮತ್ತು ನಿರ್ಣಾಯಕವಾದ ನೀತಿಗಳ ಅವಶ್ಯಕತೆಯಿದೆ. ಮುಂದಿನ ಐದು ವರ್ಷಗಳಲ್ಲಿ ಪಿಎಸ್ಯು ಬ್ಯಾಂಕ್ ಅನ್ನು ಸಮರ್ಪಕವಾಗಿ ಮರು ಬಂಡವಾಳದ ಹೂಡಿಕೆಯಾಗಿ ಇರಿಸಿಕೊಳ್ಳಲು, ದೊಡ್ಡ ಸಾರ್ವಜನಿಕ ಹಣ ಹೂಡಿಕೆಯ ಅಗತ್ಯವಿರುತ್ತದೆ ಎಂದು ಸಿಂಗ್ ಸಲಹೆ ನೀಡಿದರು.