ನವದೆಹಲಿ :ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆ ಗಮನಾರ್ಹ ಸುಧಾರಣೆ ಕಂಡು ಬಂದ ನಂತರ 2021ರ ಏಪ್ರಿಲ್ನಿಂದ ಪ್ರಾರಂಭವಾಗುವ 2022ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.8.9ರಷ್ಟು ಬೆಳವಣಿಗೆಯೊಂದಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಐಹೆಚ್ಎಸ್ ಮಾರ್ಕಿಟ್ ಹೇಳಿದೆ.
ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ.7.7ರಷ್ಟು ಕುಗ್ಗಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಗುರುವಾರ ಅಂದಾಜಿಸಿತ್ತು. ಇದು ನಾಲ್ಕು ದಶಕಗಳಲ್ಲಿನ ಅತ್ಯಂತ ಕೆಟ್ಟ ಸಾಧನೆ ಆಗಿದೆ.
2020ರಲ್ಲಿ ಭಾರತೀಯ ಆರ್ಥಿಕತೆಯು ತೀವ್ರ ಆರ್ಥಿಕ ಹಿಂಜರಿತ ಅನುಭವಿಸಿತು. ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಅತ್ಯಂತ ಕೆಟ್ಟ ಸಂಕೋಚನ ಕಂಡು ಬಂದಿದ್ದು, ಸೆಪ್ಟೆಂಬರ್‌ನಿಂದ ಆರ್ಥಿಕ ಚಟುವಟಿಕೆಯಲ್ಲಿ ಸದೃಢವಾದ ಮರು ಚೇತರಿಕೆ ಪ್ರದರ್ಶಿಸುತ್ತಿದೆ ಎಂದು ಐಹೆಚ್ಎಸ್ ಮಾರ್ಕಿಟ್ ಹೇಳಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23.9ರಷ್ಟು ಕುಗ್ಗಿತ್ತು. ಈ ಸಂಕೋಚನವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.5ಕ್ಕೆ ಇಳಿದಿದೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಮತ್ತು ಬಳಕೆ ವೆಚ್ಚವು ಮರುಕಳಿಸಿದ್ದನ್ನ ತೋರಿಸಿದೆ.