ನವದೆಹಲಿ:2018ರ ಸಾಲಿನ ಜಾಗತಿಕ ಆರ್ಥಿಕ ರಾಷ್ಟ್ರಗಳ ಜಿಡಿಪಿ ಶ್ರೇಣಿಯಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದ್ದು, 2017ರ ವರ್ಷಕ್ಕಿಂತ ಒಂದು ಸ್ಥಾನ ಕೆಳಗಿಳಿದಿದೆ.
ಕಳೆದ ವರ್ಷದ ಆರ್ಥಿಕತೆಯಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣದ ಹಿನ್ನಲೆಯಲ್ಲಿ 2.7 ಟ್ರಿಲಿಯನ್ ಡಾಲರ್ನ ಜಿಡಿಪಿಯಿಂದಾಗಿ 7ನೇ ಸ್ಥಾನಕ್ಕೆ ಬಂದಿದೆ. 2.8 ಟ್ರಿಲಿಯನ್ ಡಾಲರ್ ಹೊಂದಿರುವ ಫ್ರಾನ್ಸ್ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ ಎಂದು ವಿಶ್ವಬ್ಯಾಂಕ್ ಈಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಅಮೆರಿಕ 20.5 ಟ್ರಿಲಿಯನ್ ಡಾಲರ್ ಜಿಡಿಪಿ ಮುಖೇನ ಮೊದಲ ಸ್ಥಾನದಲ್ಲಿದ್ದು, ನೆರೆಯ ಚೀನಾ 13.6 ಟ್ರಿಲಿಯನ್ ಡಾಲರ್ನಿಂದ 2ನೇ ಸ್ಥಾನದಲ್ಲಿದೆ. ಜಪಾನ್- 5 ಟ್ರಿಲಿಯನ್ ಡಾಲರ್, ಜರ್ಮನ್- 4.0 ಟ್ರಿಲಿಯನ್ ಡಾಲರ್ ಹಾಗೂ ಇಂಗ್ಲೆಂಡ್- 2.8 ಟ್ರಿಲಿಯನ್ ಡಾಲರ್ ಜಿಡಿಪಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.ಡಾಲರ್ ಎದುರು ರೂಪಾಯಿ ಏರಿಳಿತ ಮತ್ತು ಮಂದಗತಿ ಆರ್ಥಿಕ ಬೆಳವಣಿಗೆಯಿಂದ ಜಾಗತಿಕ ಜಿಡಿಪಿ ಶ್ರೇಣಿಯಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದೆ ಎಂದು ಎಕನಾಮಿಸ್ಟ್ ಇಂಡಿಯಾ ರೇಟಿಂಗ್ಸ್ ಮತ್ತು ರೀಸರ್ಚ್ನ ಮುಖ್ಯಸ್ಥ ದೇವೇಂದ್ರ ಪಂತ್ ವಿಶ್ಲೇಷಿಸಿದ್ದಾರೆ.