ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್ ರೋಗದ ವಿರುದ್ಧ ಹೋರಾಟಕ್ಕೆ ವಿಶ್ವ ಬ್ಯಾಂಕ್ನಿಂದ ಭಾರತವು 2.5 ಬಿಲಿಯನ್ ಡಾಲರ್ (18,632 ಕೋಟಿ ರೂ.) ಮೌಲ್ಯದಷ್ಟು ಸಾಲ ಪಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆರೋಗ್ಯ, ಸಾಮಾಜಿಕ ರಕ್ಷಣೆ ಮತ್ತು ಆರ್ಥಿಕ ಪ್ರಚೋದನೆ ಎಂಬ ಮೂರು ವರ್ಗೀಕರಣಗಳಡಿ ಈ ಸಾಲ ಪಡೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದರು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಾಲದ ಲಾಭವನ್ನು ಪಡೆದಿವೆ. ವೈರಸ್‌ಗೆ ಸಂಬಂಧಿಸಿದ ಆರೋಗ್ಯ ಕ್ರಮಗಳಿಗೆ ನೆರವಾಗಲು ಭಾರತವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಏಪ್ರಿಲ್ 3ರಂದು ಮೊದಲ ಬಾರಿಯ ಸಾಲಕ್ಕೆ ಸಹಿ ಹಾಕಲಾಗಿತ್ತು ಎಂದರು.
ಸಾರ್ವಜನಿಕ ಆರೋಗ್ಯ ಸನ್ನದ್ಧತೆಗಾಗಿ ರಾಷ್ಟ್ರೀಯ ಯಂತ್ರೋಪಕರಣ ಬಲಪಡಿಸುವುದರ ಜೊತೆಗೆ ರೋಗ ಹರಡುವಿಕೆಯಿಂದ ಉಂಟಾಗುವ ಬೆದರಿಕೆ ಕ್ರಮಗಳ ತಡೆಗೆ, ಸೋಂಕಿತರ ಪತ್ತೆಹಚ್ಚಲು ಮತ್ತು ತಕ್ಷಣ ಪ್ರತಿಕ್ರಿಯಿಸುವಂತಹ ಭಾರತದ ಕ್ರಮಗಳಿಗೆ ಹಣಕಾಸಿನ ನೆರವನ್ನು ವಿಶ್ವ ಬ್ಯಾಂಕ್ ನೀಡಿತ್ತು.
ರಾಜ್ಯಸಭೆಯಲ್ಲಿ ಸಲ್ಲಿಕೆಯಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತಕ್ಕೆ ವಿಶ್ವಬ್ಯಾಂಕ್‌ನ ಎರಡನೇ ಕಂತಿನ ಆರ್ಥಿಕ ನೆರವು ಮೇ 15ರಂದು ಬಂದಿದ್ದು, ಅದನ್ನು ಸಂಪೂರ್ಣವಾಗಿ ವಿತರಿಸಲಾಗಿದೆ.
ಪರಿಹಾರ ಕ್ರಮಗಳನ್ನು ಬೆಂಬಲಿಸಲು ಕೋವಿಡ್ -19 ಸಾಮಾಜಿಕ ಸಂರಕ್ಷಣಾ ಪ್ರತಿಕ್ರಿಯೆಯ ಕಾರ್ಯಕ್ರಮಗಳನ್ನು ತ್ವರಿತಗೊಳಿಸಲಾಗಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಬಜೆಟ್ ಬೆಂಬಲವಾಗಿ 750 ಮಿಲಿಯನ್ ಡಾಲರ್ ಮೌಲ್ಯದ ಸಾಮಾಜಿಕ ಸಂರಕ್ಷಣಾ ಕ್ರಮಗಳಿಗೆ ಸಂಬಂಧಿಸಿದ ಎರಡನೇ ಸಾಲವನ್ನು 2020ರ ಮೇ15 ರಂದು ಸಹಿ ಮಾಡಲಾಗಿತ್ತು. ಇದನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.